ಅಧಿಕಾರಿಗಳ ನಿರುತ್ಸಾಹದಿಂದ ಅಭಿವೃದ್ಧಿಗೆ ಹಿನ್ನಡೆ

0
KDP meeting held at T.P. office
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೇಶ-ರಾಜ್ಯದ ಆಡಳಿತ ವ್ಯವಸ್ಥೆಯ ಅಧಿಕಾರ ಅಧಿಕಾರಿಗಳ ಕೈಯಲ್ಲಿರುತ್ತದೆಯೇ ಹೊರತು ರಾಜಕಾರಣಿಗಳ ಕೈಲಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಅತ್ಯಂತ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

Advertisement

ಅವರು ಬುಧವಾರ ಪಟ್ಟಣದ ತಾ.ಪಂ ಕಾರ್ಯಾಲಯದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ತಾವು ಚುನಾವಣೆ ಸಂದರ್ಭದಲ್ಲಿ ಮತ್ತು ನಂತರ ನೀಡಿ ಭರವಸೆಗಳನ್ನು ಈಡೇರಿಸಲಾಗುತ್ತಿಲ್ಲ.

ಕಾರಣ ಅಧಿಕಾರಿಗಳ ನಿರುತ್ಸಾಹ, ನಿಷ್ಕಾಳಜಿ ಎದ್ದು ಕಾಣುತ್ತಿದೆ. ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಹಂತದ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಮೊದಲು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ ಅವರೊಂದಿಗೆ ಚರ್ಚೆ ನಡೆಸಿ, ಪ್ರಸಕ್ತ ಮುಂಗಾರಿನಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೊಡಮಾಡಿದ ಹೆಸರು ಬೀಜ ಕಳಪೆ ಗುಣಮಟ್ಟದ್ದಾಗಿದ್ದರಿಂದ ರೈತರು ಹೆಚ್ಚಿನ ದರ ನೀಡಿ ಖಾಸಗಿ ಕಂಪನಿಯ ಬೀಜಗಳನ್ನು ಖರೀದಿಸುವಂತಾಯಿತು. ಇದರಿಂದ ಇಲಾಖೆಯ ಬಿತ್ತನೆ ಬೀಜಗಳು ಮಾರಾಟವಾಗದೇ ಉಳಿದಿವೆ.

ಮುಂಬರುವ ದಿನಗಳಲ್ಲಿ ಈ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ತಪ್ಪಿನಿಂದಾಗಿಯೇ ಅನೇಕ ರೈತರಿಗೆ ಬೆಳೆಹಾನಿ ಪರಿಹಾರ, ಬೆಳೆವಿಮೆ ಪರಿಹಾರ ಅರ್ಹರಿಗೆ ಬಂದಿಲ್ಲ, ಅನರ್ಹರಿಗೆ ಬಂದಿವೆ. ಬೆಳೆವಿಮೆ ಏಜೆಂಟರ ಹಾವಳಿ ತಪ್ಪಿಸಬೇಕು, ಕೃಷಿ ಇಲಾಖೆ ರೈತಪರವಾದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜೆಜೆಎಂ ಯೋಜನೆ ಕಾಮಗಾರಿ ಅತ್ಯಂತ ಕಳಪೆ ಮತ್ತು ನಿಧಾನಗತಿಯಲ್ಲಿ ಸಾಗಿದ್ದು, ವರ್ಷಗಳೇ ಕಳೆದರೂ ಎಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ ಅಧಿಕಾರಿಗಳು ಮಾತ್ರ ತಪ್ಪು ಮಾಹಿತಿ ನೀಡಿದ್ದೀರಿ. ಕ್ರಿಯಾಯೋಜನೆಯಂತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಪಿಆರ್‌ಡಿ ಇಂಜನಿಯರ್ ಮಾರುತಿ ರಾಠೋಡ ಅವರಿಗೆ ತಿಳಿಸಿದರು.

ತಾಲೂಕಿನಲ್ಲಿ ಹದಗೆಟ್ಟ ರಸ್ತೆ ಕಾಮಗಾರಿ, ಮಳೆಯಿಂದ ಹಾಳಾದ ಸೇತುವೆ ನಿರ್ಮಾಣದತ್ತ ಚಿತ್ತ ಹರಿಸಿ ರೈತರು, ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅನಕೂಲಕ ಕಲ್ಪಿಸಬೇಕು ಎಂದು ಪಿಡಬ್ಲೂಡಿ ಮತ್ತು ಪಿಎಂಜಿಎಸ್‌ವೈ ಅಧಿಕಾರಿಗಳಿಗೆ ಸೂಚಿಸಿದರು. ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ಭಾಗದಲ್ಲಿ ಅರ್ಧಕ್ಕೆ ನಿಂತಿರುವ ವಸತಿ ಶಾಲಾ ಕಟ್ಟಡಗಳು ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಮತ್ತ ಬಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಪಿಡಿಓಗಳು ತಾವು ಕಾರ್ಯ ನಿರ್ವಹಿಸುವ ಕೇಂದ್ರ ಸ್ಥದಲ್ಲಿಯೇ ವಾಸವಿರುವ ನಿಟ್ಟಿನಲ್ಲಿ ಗಮನ ಹರಿಸಬೇಕು.

ಸಭೆಯಲ್ಲಿ ತಹಸೀಲ್ದಾರ ವಾಸುದೇವ ಎಂ.ಸ್ವಾಮಿ, ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ ಉಪಸ್ಥಿತರಿದ್ದರು. ಶಿಕ್ಷಣ, ಆರೋಗ್ಯ, ತೋಟಗಾರಿಕೆ, ಅರಣ್ಯ, ಭೂಮಾನ, ನೋಂದಣಾಧಿಕಾರಿ, ನೀರಾವರಿ, ಸಾರಿಗೆ, ಪುರಸಭೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ, ಬಾಣಂತಿಯರಿಗೆ ನೀಡುವ ಬೆಲ್ಲ, ಮೊಟ್ಟೆ, ರವಾ ಸೇರಿ ಆಹಾರ ಪದಾರ್ಥಗಳು ಗುಣಮಟ್ಟದ್ದಾಗಿಲ್ಲ. ಅಂಗನವಾಡಿಗೆ ಆಹಾರ ವಿತರಣೆ ಮಾಡುವ ಜವಾಬ್ದಾರಿಯನ್ನು 10 ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿದ ತಮಿಳುನಾಡು ಮೂಲದ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಗುಣಮಟ್ಟದ ಆಹಾರ ಪೂರೈಕೆಗೆ ಒತ್ತು ಕೊಡಬೇಕು. ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಿ.ಪಂನಿಂದ ಬಂದಿರುವ ಅನುದಾನದೊಂದಿಗೆ ನರೇಗಾ ಅನುದಾನ ಬಳಸಿ ಗುಣಮಟ್ಟದ ಕಾಮಗಾರಿಯೊಂದಿಗೆ ಅಂಗನವಾಡಿ ಕಟ್ಟಡ ಅದಷ್ಟು ಬೇಗ ನಿರ್ಮಾಣಗೊಳ್ಳಬೇಕು ಎಂದು ಸಿಡಿಪಿಓ ಮೃತ್ಯುಂಜಯ ಗುಡ್ಡದನವೇರಿಗೆ ತಿಳಿಸಿದರು.


Spread the love

LEAVE A REPLY

Please enter your comment!
Please enter your name here