ವಿಜಯಸಾಕ್ಷಿ ಸುದ್ದಿ, ಗದಗ : ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಸ್ವಾತಂತ್ರ‍್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚನ್ನಮ್ಮಾಜೀ ಅವರ 200ನೇ ವಿಜಯೋತ್ಸವ ಹಾಗೂ 204ನೇ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸಲು ಗದಗ ಜಿಲ್ಲಾ ಪಂಚಮಸಾಲಿ ಸಮಾಜ ನಿರ್ಧರಿಸಿದೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾಗೂ ಗದಗ ಜಿಲ್ಲಾ ಪಂಚಮಸಾಲಿ ಸಮಾಜದಿಂದ ಕಾರ್ಯಕ್ರಮ ನಡೆಯುತ್ತದೆ.
ಬುಧವಾರ ಬೆಳಗ್ಗೆ 9 ಗಂಟೆಗೆ ಕಿತ್ತೂರ ರಾಣಿ ಚನ್ನಮ್ಮ ಅವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನಂತರ ಶ್ರೀ ರಾಚೋಟೇಶ್ವರ ದೇವಸ್ಥಾನದಿಂದ ಸುಮಾರು 100ಕ್ಕೂ ಹೆಚ್ಚು ಮಹಿಳೆಯರಿಂದ ಕುಂಭಮೇಳ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಬೆಳಿಗ್ಗೆ 11 ಗಂಟೆಗೆ ವೀರರಾಣಿ ಕಿತ್ತೂರು ಚನ್ನಮ್ಮಾಜೀಯ ಭಾವಚಿತ್ರದ ಅದ್ದೂರಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದ್ದು, ಗಾಂಧಿ ಸರ್ಕಲ್ ಹತ್ತಿರ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಗರದ ಗಾಂಧಿವೃತ್ತ, ಮಹೇಂದ್ರಕರ್ ಸರ್ಕಲ್, ಹುಯಿಲಗೋಳ ನಾರಾಯಣರಾವ್ ವೃತ್ತ, ಬಸವೇಶ್ವರ ಸರ್ಕಲ್, ಪಂಚರ ಹೊಂಡ್, ಬನ್ನಿಕಟ್ಟಿ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ಸಂಪನ್ನಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಶಾಂತಣ್ಣ ಮುಳವಾಡ,ˌ ಮಹೇಶ್ ಕರಬಿಷ್ಠಿ, ನಗರಸಭೆ ಸದಸ್ಯರಾದ ಮಹಾಂತೇಶ್ ನಲವಡಿ, ಜಯಶ್ರೀ ಉಗಲಾಟದ, ನೀಲಮ್ಮ ಬೋಳನವರ, ಸ್ವಾತಿ ಅಕ್ಕಿ, ಸಂಗಮೇಶ್ ಕವಳಿಕಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯದ ಕಾನೂನು, ನ್ಯಾಯ, ಸಂಸದೀಯ ವ್ಯವಹಾರ, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ, ಶಾಸಕರಾದ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಜಿಲ್ಲೆಯ ಪಂಚಮಸಾಲಿ ಸಮಾಜದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಿದ್ದಣ್ಣ ಪಲ್ಲೇದ ತಿಳಿಸಿದರು.