ಬೆಂಗಳೂರು: ಕೋಗಿಲು ಲೇಔಟ್ನ ಅಕ್ರಮ ನಿವಾಸಿಗಳಿಗೆ ಸರ್ಕಾರ ವಸತಿ ಒದಗಿಸುವ ವಿಚಾರಕ್ಕೆ ಸಂಬಂಧಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್, “ಜಮೀರ್ಗೆ ದೇಶವೂ ಬೇಡ, ರಾಜ್ಯವೂ ಬೇಡ. ತಮ್ಮ ಜನಸಂಖ್ಯೆ ಮತ್ತು ಮತದಾರರು ಹೆಚ್ಚಾಗಬೇಕು ಎಂಬ ಉದ್ದೇಶದಿಂದಲೇ ಮನೆಗಳನ್ನು ನೀಡಲಾಗುತ್ತಿದೆ” ಎಂದು ಆರೋಪಿಸಿದರು.
ಕೋಗಿಲು ಲೇಔಟ್ ಅಕ್ರಮ ನಿವಾಸಿಗಳ ಬಗ್ಗೆ “ಅವರೆಲ್ಲ ಮುಸ್ಲಿಮರು” ಎಂದು ಜಮೀರ್ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರದ ನಿರ್ಧಾರವು ಮತಬ್ಯಾಂಕ್ ರಾಜಕಾರಣದ ಭಾಗವಾಗಿದೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಉಲ್ಲೇಖಿಸಿದ ಯತ್ನಾಳ್,
“ಜಾತ್ಯಾತೀತತೆ ಎಂಬ ಹೆಸರಿನಲ್ಲಿ ಮುಸ್ಲಿಂ ತುಷ್ಟೀಕರಣ ನಡೆಯುತ್ತಿದೆ. ನಿಜವಾದ ಕನ್ನಡಿಗರು ಹಾಗೂ ಮೂಲ ನಿವಾಸಿಗಳಿಗೆ ವಸತಿ ನೀಡುವ ಬದಲು, ಕಾಂಗ್ರೆಸ್ ಹೈಕಮಾಂಡ್ ಒತ್ತಡದಿಂದ ಸ್ಥಳೀಯರಲ್ಲದವರಿಗೆ ಮನೆ ಕೊಡಲಾಗುತ್ತಿದೆ” ಎಂದು ಆರೋಪಿಸಿದರು.
ಇನ್ನೂ, “ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆಗೆ ತಲುಪಿದೆ. ಯಾವ ದೇಶದವರು ಎಂಬುದನ್ನು ಸರಿಯಾಗಿ ತನಿಖೆ ಮಾಡದೇ, ಕೇವಲ ವೋಟ್ ಬ್ಯಾಂಕ್ ಸಲುವಾಗಿ ಸರ್ಕಾರ ಮನೆ ನೀಡಲು ಮುಂದಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ” ಎಂದು ಯತ್ನಾಳ್ ಹೇಳಿದರು. ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು ಹಾಗೂ ರೋಹಿಂಗ್ಯಾಗಳು ಇದ್ದಾರೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ, ಬಳಿಕವೇ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.



