Home Crime News ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಖಾಕಿ ಪ್ರಕರಣ ಭೇದಿಸಿದ್ದೇ ರೋಚಕ

ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಖಾಕಿ ಪ್ರಕರಣ ಭೇದಿಸಿದ್ದೇ ರೋಚಕ

0
ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಖಾಕಿ ಪ್ರಕರಣ ಭೇದಿಸಿದ್ದೇ ರೋಚಕ
Spread the love

ಚಿಕ್ಕೋಡಿ: ಆಸ್ತಿ ವಿವಾದಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಂದು, ಅದು ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಖತರ್ನಾಕ್ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ. ಮೃತನನ್ನು ಬಸಲಿಂಗ ರಾಮಾಪುರೆ (38) ಎಂದು ಗುರುತಿಸಲಾಗಿದ್ದು, ಆತನ ಸಹೋದರ ಸಿದ್ದಪ್ಪ ರಾಮಾಪುರೆಯೇ ಕೊಲೆ ಆರೋಪಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಡಿಸೆಂಬರ್ 18ರಂದು ಬಸಲಿಂಗ ರಾಮಾಪುರೆ ಮೃತಪಟ್ಟಿದ್ದರು. ಹಂಚು ಹಾಕುವ ವೇಳೆ ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಆದರೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಸಾವಿನ ಬಗ್ಗೆ ಅನುಮಾನ ಮೂಡಿತ್ತು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣವೇ ಸಾವಿಗೆ ಕಾರಣ ಎಂದು ವರದಿ ನೀಡಿದರು. ಇದರಿಂದ ಪ್ರಕರಣದಲ್ಲಿ ಕೊಲೆ ಶಂಕೆ ಗಟ್ಟಿಯಾಗಿದ್ದು, ಪೊಲೀಸರು ಬಸಲಿಂಗ ಕುಟುಂಬಸ್ಥರನ್ನು ಮತ್ತೊಮ್ಮೆ ವಿಚಾರಣೆ ನಡೆಸಿದರು.

ನಾಲ್ಕು ಎಕರೆ ಜಮೀನಿಗಾಗಿ ಬಸಲಿಂಗ ಮತ್ತು ಸಿದ್ದಪ್ಪ ನಡುವೆ ಗಲಾಟೆ ನಡೆದಿತ್ತು. ಆಸ್ತಿ ಬಗ್ಗೆ ತಮ್ಮ ಬಸಲಿಂಗ ಅಣ್ಣನ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಹೀಗಾಗಿ ದನದ ಕೊಟ್ಟಿಗೆಯಲ್ಲಿ ಆತನ ಮೇಲೆ ಸಿದ್ದಪ್ಪ ಹಲ್ಲೆ ನಡೆಸಿದ್ದ. ಕಟ್ಟಿಗೆ ಮತ್ತು ಕಲ್ಲಿನಿಂದ ದಾಳಿ ನಡೆಸಿದ ಪರಿಣಾಮ ಬಸಲಿಂಗ ಮೃತಪಟ್ಟಿದ್ದ.

ತಾಯಿ ರತ್ನವ್ವ ಮತ್ತು ಬಸಲಿಂಗನ ಪತ್ನಿ ವೀಣಾ ಎದುರೇ ಈ ಘಟನೆ ನಡೆದಿತ್ತು. ಬಳಿಕ ವೀಣಾಗೆ ಜೀವ ಬೆದರಿಕೆ ಹಾಕುವ ಮೂಲಕ ಸಿದ್ದಪ್ಪ ಪ್ರಕರಣ ಮುಚ್ಚಿಹಾಕಿದ್ದ. ಆದರೆ ಆತನ ತಾಯಿಯೇ ಈಗ ಮಗನ ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.ರತ್ನವ್ವ ನೀಡಿದ ಮಾಹಿತಿಯ ಆಧಾರದಲ್ಲಿ ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.


Spread the love

LEAVE A REPLY

Please enter your comment!
Please enter your name here