ಚಿಕ್ಕಮಗಳೂರು: ಎರಡು ತೆಂಗಿನ ಗಿಡಗಳನ್ನು ಕತ್ತರಿಸಿ ಹಾಕಿದ್ದಕ್ಕೆ ಸಿಟ್ಟಿಗೆದ್ದ ಮಾವನೊಬ್ಬ ಅಳಿಯನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ.
ಆಲದಹಳ್ಳಿ ತಾಂಡ್ಯಾದ ದೇವರಾಜ್ ನಾಯ್ಕ್ (35) ಕೊಲೆಯಾದ ದುರ್ದೈವಿಯಾಗಿದ್ದು, ಈತನ ಮಾವ ರಾಜಾನಾಯ್ಕ್ ಕೊಲೆಗೈದ ಆರೋಪಿಯಾಗಿದ್ದಾನೆ. ರಾಜಾನಾಯ್ಕ್ ಅವರ ಮಗಳನ್ನೇ ದೇವರಾಜ್ ಮದುವೆಯಾಗಿದ್ದ. ಆದರೆ ದಂಪತಿ ನಡುವೆ ಪ್ರತಿದಿನ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಪತ್ನಿಯು ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.
ಅಳಿಯ ದೇವರಾಜ್ ನಾಯ್ಕ್ ಹಾಗೂ ಮಾವ ರಾಜಾನಾಯ್ಕ್ ನಡುವೆಯೂ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಹೀಗೆ ಜಗಳವಾಡಿದ್ದ ದೇವರಾಜ್, ಇತ್ತೀಚೆಗೆ ಮಾವನ ಹೊಲದಲ್ಲಿದ್ದ ಎರಡು ತೆಂಗಿನ ಗಿಡಗಳನ್ನು ಕತ್ತರಿಸಿ ಹಾಕಿದ್ದ. ಇದರಿಂದ ತೀವ್ರ ಕೋಪಗೊಂಡ ರಾಜಾನಾಯ್ಕ್, ಮಚ್ಚಿನಿಂದ ಕೊಚ್ಚಿ ಅಳಿಯ ದೇವರಾಜ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ಕುರಿತು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

