ಕೋಲಾರ: ಅನಾರೋಗ್ಯದಿಂದ ಒಂಟಿಯಾಗಿ ಮನೆಯಲ್ಲಿದ್ದ ವೃದ್ದನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರ ತಾಲ್ಲೂಕು ಸೀಪುರ ಗ್ರಾಮದಲ್ಲಿ ನಡೆದಿದೆ. ವೆಂಟಕರಾಮಪ್ಪ (೭೦) ಕೊಲೆಯಾದ ವ್ಯಕ್ತಿಯಾಗಿದ್ದು, ಅನಾರೋಗ್ಯ ಹಿನ್ನೆಲೆ ವೆಂಕಟರಾಮಪ್ಪ ಮನೆಯಲ್ಲಿಯೇ ಇದ್ದರು.
ಇನ್ನೂ ಪತ್ನಿ ಆನಂದಮ್ಮ ಕೂಲಿ ಕೆಲಸಕ್ಕೆ ಹೋಗಿದ್ದರು. ನಿನ್ನೆ ರಾತ್ರಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿರೋದನ್ನ ಕಂಡಿದ್ದಾರೆ. ಆರಂಭದಲ್ಲಿ ಬಿಪಿ ಅಥವಾ ಶುಗರ್ ಕಾಯಿಲೆಯಿಂದ ಕುಸಿದು ಬಿದ್ದು ತಲೆಗೆ ಪೆಟ್ಟಾಗಿರಬೇಕು ಅಂದುಕೊಂಡು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ.
ಆದರೆ ಮನೆಯಲ್ಲಿನ ವಸ್ತುಗಳಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಎಲ್ಲ ಕಡೆ ಖಾರದ ಪುಡಿ ಚೆಲ್ಲಿರೋದು ಗಮನಕ್ಕೆ ಬಂದಿದೆ. ಜೊತೆಗೆ ಮನೆಯಲ್ಲಿದ್ದ ಹಣ ಮತ್ತು ಒಡೆವೆ ದರೋಡೆ ಆಗಿರುವ ಕಾರಣ ಇದು ಕೊಲೆ ಎಂಬುದು ಗೊತ್ತಾಗಿದೆ. ಘಟನೆ ಬಗ್ಗೆ ಗ್ರಾಮಸ್ಥರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಇನ್ನೂ ಘಟನೆ ಸಂಬಂಧ ಶ್ವಾನದಳ ಹಾಗೂ ಸೋಕೋ ಟೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಮುಂದಾಗಿರೋ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.


