ಕೊಪ್ಪಳ: ಜಿಲ್ಲೆಯ ಕುಕನೂರ ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಘಟನೆ ಸಂಬಂಧ ಆರು ಮಂದಿಯ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಜೊತೆಗೆ ವಸತಿ ನಿಲಯದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಈ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರು ಸಲ್ಲಿಸಿದ್ದು, ಹನುಮಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕುಕನೂರ ತಂಡದ ವೈದ್ಯರಾದ ಭರತೇಶ್ ಮತ್ತು ಸಬೀಯಾ ವಿರುದ್ಧ ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸತಿ ನಿಲಯದ ಮಕ್ಕಳ ಆರೋಗ್ಯ ಪರಿಶೀಲನೆಗಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಪ್ರತಿ ತಿಂಗಳು ವೈದ್ಯಕೀಯ ತಪಾಸಣೆ ನಡೆಯುತ್ತದೆ. ಆದರೆ ವಿದ್ಯಾರ್ಥಿನಿಯನ್ನು ಎರಡು ತಿಂಗಳ ಹಿಂದೆ ಪರೀಕ್ಷಿಸಿದಾಗಲೂ ಗರ್ಭಿಣಿಯಾಗಿರುವುದು ಪತ್ತೆಯಾಗಿಲ್ಲ ಎಂಬ ಗಂಭೀರ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಇಬ್ಬರು ವೈದ್ಯಾಧಿಕಾರಿಗಳ ಮೇಲೆಯೂ ಕೇಸ್ ದಾಖಲಿಸಲಾಗಿದೆ.
ಇನ್ನೂ ವಸತಿ ನಿಲಯದ ಮೇಲ್ವಿಚಾರಕಿ ಪಾರ್ವತಿ ಹಾಗೂ ಅಡುಗೆ ಸಹಾಯಕರಾದ ಪ್ರಿಯಾಂಕಾ ಮತ್ತು ಇನ್ನೊಬ್ಬ ಸಿಬ್ಬಂದಿರನ್ನು ಅಮಾನತು ಮಾಡಿದರೆಂದು ತಿಳಿದು ಬಂದಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಘಟನೆ ಕುರಿತು ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಪ್ರತ್ಯೇಕ ವರದಿ ಪಡೆಯಲು ಮುಂದಾಗಿದೆ.



