HomeCrime NewsKPSC ನೇಮಕಾತಿ ಹಗರಣ: 10ಕ್ಕೂ ಹೆಚ್ಚು ಮಂದಿಗೆ ಪ್ರಶ್ನೆಪತ್ರಿಕೆ ಮಾರಾಟ, ₹1.3 ಕೋಟಿ ಹಣದ ರಹಸ್ಯ...

KPSC ನೇಮಕಾತಿ ಹಗರಣ: 10ಕ್ಕೂ ಹೆಚ್ಚು ಮಂದಿಗೆ ಪ್ರಶ್ನೆಪತ್ರಿಕೆ ಮಾರಾಟ, ₹1.3 ಕೋಟಿ ಹಣದ ರಹಸ್ಯ ಬಯಲು!

For Dai;y Updates Join Our whatsapp Group

ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಒಂದೊಂದೇ ಸ್ಫೋಟಕ ಸಂಗತಿಗಳು ಹೊರಬರುತ್ತಿವೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆದಿರುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡುವುದಾಗಿ ಹೇಳಿದ್ದ ಬಸವರಾಜ್ ಕನ್ನಾಳೆ, 10ಕ್ಕೂ ಹೆಚ್ಚು ಮಂದಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಮತ್ತೊಂದೆಡೆ, ಜ್ಞಾನೇಂದ್ರ ಕುಮಾರ್‌ಗೆ ಬರೋಬ್ಬರಿ 1.30 ಕೋಟಿ ರೂಪಾಯಿ ನಗದು ತಲುಪಿರುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಕೆಪಿಎಸ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಗಳಾದ ಬಸವರಾಜ್ ಕನ್ನಾಳೆ ಹಾಗೂ ಜ್ಞಾನೇಂದ್ರ ಕುಮಾರ್ ನಡುವಿನ ಹಣಕಾಸು ವ್ಯವಹಾರದ ಬಗ್ಗೆ ತನಿಖಾಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ ಕೇವಲ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡುವುದಾಗಿ ಜ್ಞಾನೇಂದ್ರ ಕುಮಾರ್‌ಗೆ ಕನ್ನಾಳೆ ತಿಳಿಸಿದ್ದ. ಆದರೆ, ತನಿಖೆ ಮುಂದುವರಿದಂತೆ 10ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಇನ್ನು, ಪ್ರಶ್ನೆಪತ್ರಿಕೆ ಸೋರಿಕೆಗಾಗಿ ಜ್ಞಾನೇಂದ್ರ ಕುಮಾರ್, ಬಸವರಾಜ್ ಕನ್ನಾಳೆಯಿಂದ ಬರೋಬ್ಬರಿ 1 ಕೋಟಿ 30 ಲಕ್ಷ ರೂಪಾಯಿ ನಗದು ಪಡೆದಿರುವ ಮಾಹಿತಿ ಹೊರಬಿದ್ದಿದೆ. ಈ ಹಣದಲ್ಲಿ 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿದ್ದು, ತನ್ನ ಕುಟುಂಬದ ಇಬ್ಬರಿಗೆ 25 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ವಿವರಗಳು ತನಿಖೆಯಲ್ಲಿ ಪತ್ತೆಯಾಗಿವೆ. ಹಗರಣದಲ್ಲಿ ನಡೆದಿರುವ ಹಣಕಾಸು ವ್ಯವಹಾರದ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ, ಪ್ರಶ್ನೆಪತ್ರಿಕೆ ಸೋರಿಕೆಗೆ ಬಳಸಿದ್ದ ತಂತ್ರವೂ ತನಿಖೆಯಲ್ಲಿ ಬಯಲಾಗಿದೆ. ಜ್ಞಾನೇಂದ್ರ ಕುಮಾರ್ ತನ್ನ ಕಚೇರಿಯಲ್ಲಿಯೇ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಕೀಲಿಯನ್ನು ಟ್ಯಾಬ್‌ನಲ್ಲಿ ದಾಖಲಿಸಿಕೊಂಡಿದ್ದ. ಬಳಿಕ ಪರೀಕ್ಷೆಯ ಹಿಂದಿನ ದಿನ ಆ ಮಾಹಿತಿಯನ್ನು ಎಚ್‌ಪಿ ಪೆನ್‌ಡ್ರೈವ್‌ಗೆ ಕಾಪಿ ಮಾಡಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ.

ಜನವರಿ 7ರಂದು ಪ್ರಶ್ನೆಪತ್ರಿಕೆ ಹಾಗೂ ಉತ್ತರ ಕೀ ಹೊಂದಿದ್ದ ಪೆನ್‌ಡ್ರೈವ್ ಅನ್ನು ಬಸವರಾಜ್ ಕನ್ನಾಳೆಗೆ ಹಸ್ತಾಂತರಿಸಲಾಗಿತ್ತು ಎಂಬ ಅಂಶವೂ ತನಿಖೆಯಲ್ಲಿ ಹೊರಬಿದ್ದಿದೆ. ಈ ಮೂಲಕ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳು ಆರೋಪಿಗಳ ಕೈ ಸೇರಿದ್ದವು ಎಂಬ ಗಂಭೀರ ಆರೋಪಕ್ಕೆ ಮತ್ತಷ್ಟು ಬಲ ಸಿಕ್ಕಿದೆ.

ಇಷ್ಟೇ ಅಲ್ಲ, ಪ್ರಶ್ನೆಪತ್ರಿಕೆ ಸೋರಿಕೆಗೆ ಬಳಸಿದ್ದ ಟ್ಯಾಬ್ ಅನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಒಡೆದು ಬಿಸಾಡಿರುವ ಮಾಹಿತಿಯೂ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಕೀ ಸಂಗ್ರಹಿಸಿದ್ದ ಸಾಧನವನ್ನೇ ನಾಶಪಡಿಸುವ ಮೂಲಕ ಕೃತ್ಯದ ಸುಳಿವು ಅಳಿಸಲು ಪ್ರಯತ್ನಿಸಿರುವ ಅನುಮಾನ ವ್ಯಕ್ತವಾಗಿದೆ.

ಇನ್ನು, ಪ್ರಶ್ನೆಪತ್ರಿಕೆ ಖರೀದಿಸಿದ 10ಕ್ಕೂ ಹೆಚ್ಚು ಮಂದಿ ಯಾರು? ಪ್ರತಿಯೊಬ್ಬರಿಂದ ಎಷ್ಟು ಹಣ ಪಡೆಯಲಾಗಿತ್ತು? ಈ ಹಗರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ? ಎಂಬ ಪ್ರಶ್ನೆಗಳು ಎದುರಾಗಿವೆ. ಪ್ರಶ್ನೆಪತ್ರಿಕೆ ಸೋರಿಕೆಯ ಜಾಲ ಎಷ್ಟು ದೊಡ್ಡದಾಗಿದೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಒಟ್ಟಿನಲ್ಲಿ, ಕೆಪಿಎಸ್ಸಿ ನೇಮಕಾತಿ ಹಗರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲದೆ, ಕೋಟಿ ಕೋಟಿ ರೂಪಾಯಿ ವ್ಯವಹಾರ ಹಾಗೂ ಸಾಕ್ಷ್ಯ ನಾಶದ ಆರೋಪಗಳೂ ಬೆಳಕಿಗೆ ಬಂದಿವೆ. ತನಿಖೆಯಲ್ಲಿ ಹೊರಬರುತ್ತಿರುವ ಹೊಸ ಸಂಗತಿಗಳು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದ್ದು, ಹಗರಣದ ಸಂಪೂರ್ಣ ಜಾಲ ಬಯಲಾಗಬೇಕಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img