ಬೆಂಗಳೂರು: ಬೆಂಗಳೂರಿನಲ್ಲಿ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತಿವೆ. ಬಗೆದಷ್ಟು ಆರೋಪಿಯ ಕರಾಳ ಮುಖ ಬಯಲಾಗುತ್ತಿದೆ. ಹೌದು ಬಂಧಿತ ಆರೋಪಿ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಕೊಲೆಗೆ 3 ಪ್ರಮುಖ ಕಾರಣಗಳಿದ್ದವು ಎಂದು ಮಹೇಂದ್ರ ಒಪ್ಪಿಕೊಂಡಿದ್ದು, ಆಸ್ತಿ, ಅನೈತಿಕ ಸಂಬಂಧ ಮತ್ತು ಕೃತಿಕಾಳ ಆರೋಗ್ಯ ಸಮಸ್ಯೆಗಳೇ ಕೊಲೆಗೆ ಪ್ರೇರಣೆಯಾಗಿವೆ ಎಂದು ತಿಳಿದುಬಂದಿದೆ.
ಡಾ. ಕೃತಿಕಾರೆಡ್ಡಿಗಿದ್ದ ಆರೋಗ್ಯ ಸಮಸ್ಯೆಯಿಂದ ಪತಿ ಡಾ. ಮಹೇಂದ್ರರೆಡ್ಡಿ ಬೇಸತ್ತಿದ್ದ. ತನಗೆ ವೈಯಕ್ತಿಕ ಜೀವನ ಇಲ್ಲ ಎಂದು ಕೋಪಕೊಂಡಿದ್ದ. ಹೀಗಂತಾ ವಿಚ್ಛೇದನ ಪಡೆದರೆ ತನಗೆ ಏನು ಸಿಗಲ್ಲ ಎಂಬುದು ಆರೋಪಿಗೆ ಗೊತ್ತಿತ್ತು. ಹಾಗಾಗಿ ಹೆಂಡತಿಯ ಆರೋಗ್ಯ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯೋಜನೆ ಸಿದ್ಧಪಡಿಸಿದ್ದ.
ಇದರ ಭಾಗವಾಗಿ ಡಾ.ಕೃತಿಕಾಗೆ ಅನಸ್ತೇಶಿಯಾ ಕೊಟ್ಟಿದ್ದ. ಆಕೆಯ ದೇಹದ ತೂಕಕ್ಕೆ ಕೇವಲ ಏಳರಿಂದ ಎಂಟು ಎಂ.ಎಲ್. ಅನಸ್ತೇಶಿಯಾ ನೀಡಬಹುದಾಗಿತ್ತು. ಇದು ಗೊತ್ತಿದ್ದರೂ ಆ ದಿನ ಹದಿನೈದು ಎಂ.ಎಲ್. ನೀಡಿದ್ದ ಎಂಬುದು ವೈಜ್ಞಾನಿಕ ಸಾಕ್ಷಿಗಳಿಂದ ದೃಢಪಟ್ಟಿವೆ.
ಪ್ರಕರಣ ಸಂಬಂಧ ಬಂಧಿತ ಆರೋಪಿ ಡಾ.ಮಹೇಂದ್ರರೆಡ್ಡಿಯ ಮೊಬೈಲ್ ನ ಡಾಟಾ ಕೂಡ ಪೊಲೀಸರು ರಿಟ್ರೀವ್ ಮಾಡಿದ್ದು, ಈ ವೇಳೆ ಹಲವು ಮಹತ್ವದ ಸಾಕ್ಷಿಗಳು ದೊರೆತಿವೆ. I have killed Kruthika ಎಂದು ಆರೋಪಿ ಸಂದೇಶ ಕಳುಹಿಸಿದ್ದ ಬಗ್ಗೆ ಗೊತ್ತಾಗಿದೆ. ಹೆಂಡತಿ ಸಾಯಬೇಕು, ಆದರೆ ತಾನು ಕೆಟ್ಟವನಾಗಬಾರದು. ಆಸ್ತಿಯೂ ಕೈತಪ್ಪಿ ಹೋಗಬಾರದು ಎಂಬುದು ಆರೋಪಿಯ ಪ್ಲ್ಯಾನ್ ಆಗಿತ್ತು.
ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡೇ ಡಾ.ಮಹೇಂದ್ರ ರೆಡ್ಡಿ ಕೃತ್ಯ ಎಸಗಿದ್ದ ಎಂಬುದು ಗೊತ್ತಾಗಿದೆ. ಇದರ ಜೊತೆಗೆ ಫ್ರೋಫಾಪಾಲ್ ಖರೀದಿ ಮಾಡಿದ್ದಕ್ಕೆ ಸಾಕ್ಷಿ, ಇಂಜೆಕ್ಷನ್ ಕೊಟ್ಟಿದ್ದಕ್ಕೆ ಕ್ಯಾನ್ ಮತ್ತು ಮೃತ ದೇಹದಲ್ಲಿ ಅರವಳಿಕೆ ಅಂಶ ಪತ್ತೆ ಸೇರಿ ಕೊಲೆ ಮಾಡಿರುವ ಬಗ್ಗೆ ಓರ್ವರ ಜೊತೆ ಚಾಟ್ ಮಾಡಿರುವ ಸಂಗತಿಯನ್ನೀಗ ಪೊಲೀಸರು ಬಟಾಬಯಲು ಮಾಡಿದ್ದಾರೆ. ಪತಿ ಮಹೇಂದ್ರ ರೆಡ್ಡಿ ಮೇಲಿನ ಅತಿಯಾದ ನಂಬಿಕೆ, ಪ್ರೀತಿ, ಪತಿ ಮಾಡುತ್ತಿರುವುದೆಲ್ಲಾ ನನ್ನ ಒಳ್ಳೆಯದ್ದಕ್ಕೆ ಎಂಬ ನಂಬಿಕೆಯೇ ಆಕೆಯ ಜೀವವನ್ನು ಬಲಿ ತೆಗೆದುಕೊಂಡಿದೆ.