ಹಾಸನ: ಮಂಗಳೂರಿನಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎಟಿಎಂಗಳಿಗೆ ಹಣ ತುಂಬಲು ತೆರಳುತ್ತಿದ್ದ ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ನಡೆದ ಅಪಘಾತದಲ್ಲಿ ದಿನೇಶ್ (38) ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಐಸಿಐಸಿಐ ಬ್ಯಾಂಕ್‌ಗೆ ಸೇರಿದ ಬೊಲೆರೋ ಪಿಕಪ್‌ನಲ್ಲಿ ಎಟಿಎಂಗಳಿಗೆ ಹಣ ತುಂಬಲು ತೆರಳಲಾಗುತ್ತಿತ್ತು. ಮಾರನಹಳ್ಳಿ ಬಳಿ ಬಸ್ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದ್ದು, ವಾಹನದಲ್ಲಿದ್ದ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಮತ್ತು ದುರ್ಗಾಪ್ರಸಾದ್ ಗಾಯಗೊಂಡಿದ್ದು, ಇವರೆಲ್ಲರೂ ಕೊಡಗು ಹಾಗೂ ಮಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.



