ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘವು ಗದಗಿನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಬಳಿ ನಿರ್ಮಿಸುತ್ತಿರುವ ಕುಡುವಕ್ಕಲಿಗರ ಭವನವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ರಾಜ್ಯದಲ್ಲಿಯೇ ಮಾದರಿ ಆಗುವಂತೆ ನಿರ್ಮಾಣಗೊಳ್ಳಲಿ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಶಿಸಿದರು.
ಅವರು ಗುರುವಾರ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯ ಪ್ರಾಂಗಣದಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ಪದಾಧಿಕಾರಿಗಳು, ಸಮಾಜಬಾಂಧವರು ಔಪಚಾರಿಕವಾಗಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕುಡುವಕ್ಕಲಿಗರ ಭವನಕ್ಕೆ ಈಗಾಗಲೇ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿದ್ದು, ಈ ಮೊದಲು ಮಾತು ನೀಡಿದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 28 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಣ ಸದ್ಬಳಕೆ ಆಗಬೇಕಲ್ಲದೆ ಕಟ್ಟಡದ ಗುಣಮಟ್ಟ, ಸೌಲಭ್ಯಗಳು ಒಳ್ಳೆಯ ರೀತಿಯಿಂದ ಇರಬೇಕು. 2026ರ ಅಂತ್ಯದೊಳಗೆ ಉದ್ಘಾಟನೆಯಾಗುವಂತೆ ಕ್ರಮ ಜರುಗಿಸಿ. ಶೀಘ್ರದಲ್ಲಿಯೇ ಸ್ಥಳಕ್ಕೆ ಆಗಮಿಸಿ ಕಾರ್ಯ ಪ್ರಗತಿಯನ್ನು ನೋಡುವೆ ಎಂದರು.
ಗದಗಿನ ಸಮಾಜ ಬಾಂಧವರಾದ ಪರಮೇಶ್ವರಪ್ಪ ಜಂತ್ಲಿ, ಸಿದ್ದರಾಮಪ್ಪ ಗೋಜನೂರ, ವಸಂತಪ್ಪ ಕನಾಜ ಹೊಂಬಳದ ಬಿ.ಎ. ತಿಮ್ಮಗೊಣ್ಣವರ, ಚಂದ್ರಶೇಖರ ರಾಜೂರ, ಗೋಳಪ್ಪ ಮಂಟೂರ, ಶಶಿಧರ ಕನಾಜ, ಶಿವಕುಮಾರ ರೋಣದ, ಪಿ.ಕೆ. ಹೊನ್ನಗಣ್ಣವರ, ಬೂದೇಶ ಮೈಲಾರ, ವಿ.ಕೆ. ಬಳಗೇರ, ಎಸ್.ಎನ್. ದಿಡ್ಡಿಮನಿ, ಸೊರಟೂರಿನ ಶಂಕರಣ್ಣ ಅಡ್ರಕಟ್ಟಿ, ಮಹಾದೇವಪ್ಪ, ಕರಿಯಪ್ಪ ಜಂಗವಾಡ, ಅರವೀಂದ್ರ ಗುಡಿ, ಶಿವಪ್ಪ ಹೊಳಗಿ, ಬಸವರಾಜ ಕೋಣನವರ, ರಮೇಶ ಓಂಕಾರಿ, ಶಿವಪ್ಪ ಮೇಗೂರ, ಮಹಾದೇವಪ್ಪ ಹೊಸಮನಿ ಮುಂತಾದವರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.
ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಕುಡುವಕ್ಕಲಿಗರ ಭವನವನ್ನು ರಾಜ್ಯದಲ್ಲಿಯೇ ಮಾದರಿ ಆಗುವ ರೀತಿಯಲ್ಲಿ ನಿರ್ಮಿಸಲು ಮೂರುವರೆ ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿತ್ತು. ಭೂಮಿ ಪೂಜೆಗೆ ಆಗಮಿಸಿದ್ದ ಸಚಿವರು ಸ್ಥಳೀಯ ಶಾಸಕರ ಅನುದಾನದಿಂದ 20 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಸಂಘಟನೆ ಮತ್ತು ಸಮಾಜವು ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಪ್ರಯತ್ನಿಸಿತ್ತು. ಕಟ್ಟಡ ನಿರ್ಮಾಣ ಮಂದಗತಿಯಲ್ಲಿ ಸಾಗುತ್ತಿರುವುದನ್ನು ವೀಕ್ಷಿಸಿ ಸಚಿವ ಎಚ್.ಕೆ. ಪಾಟೀಲರು ಮುಖ್ಯಮಂತ್ರಿಗಳ ಮನವೊಲಿಸಿ ಅನುದಾನವನ್ನು ಬಿಡುಗಡೆ ಮಾಡಿರುವದು ಸಮಾಜಬಾಂಧವರಿಗೆ ಆನೆಬಲ ಬಂದಂತಾಗಿದೆ ಎಂದರು.



