ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸವಣೂರ ರಸ್ತೆಯಲ್ಲಿರುವ ತಿರುಪತಿ ತದ್ರೂಪಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶುಕ್ರವಾರ ಕುಂಭಾಭಿಷೇಕ ಮಹೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯಬದ್ಧವವಾಗಿ ನೆರವೇರಿದವು. ಸಾವಿರಾರು ಜನರು ಈ ಕುಂಭೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪಕರಾದ ದಿ. ವೆಂಕಪ್ಪ ಎಂ.ಅಗಡಿ ಅವರ ಇಚ್ಛಾಶಕ್ತಿಯಿಂದ ಇಂಜಿನಿಯರಿಂಗ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಗಣದಲ್ಲಿ ಶ್ರೀ ಭೂನೀಳಾ ಸಮೇತ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣಗೊಂಡು 12 ಸಂವತ್ಸರವಾದ ಹಿನ್ನೆಲೆಯಲ್ಲಿ ಕುಂಭಾಭಿಷೇಕ ಮಹಾಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕಾರ್ತಿಕೇಯ ಶಾಸ್ತಿçಗಳ ನೇತೃತ್ವದಲ್ಲಿ ವೆಂಕಟೇಶ್ವರ, ಮೈಲಾರ ಲಿಂಗೇಶ್ವರ, ಗಣಪತಿ ದೇವರ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಶ್ರೀ ಸೂಕ್ತ, ಪುರುಷಸೂಕ್ತ, ತತ್ವನ್ಯಾಸ, ವಿಷ್ಣು ಸಹಸ್ರನಾಮ, ಕಲಾ, ದೀಕ್ಷಾ ಹೋಮ ಬಳಿಕ ಪೂರ್ಣಾಹುತಿ ಜರುಗಿತು. ಈ ಸಂದರ್ಭದಲ್ಲಿ ವೇ.ಮೂ. ಕಾರ್ತಿಕೇಯ ಶಾಸ್ತ್ರೀಗಳು ಮಾತನಾಡಿ, ಕುಂಭಾಭಿಷೇಕ ಇದು ದೇವಾಲಯದ ಸಂಪ್ರದಾಯವನ್ನು ಅವಲಂಬಿಸಿ 10, 12, 15 ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಇದರಿಂದ ದೇವಸ್ಥಾನದಲ್ಲಿನ ದೇವತಾ ಮೂರ್ತಿಗಳಲ್ಲಿ ಧನಾತ್ಮಕ ಶಕ್ತಿಗಳು ಹೆಚ್ಚಿ ಭಕ್ತರ ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ. ಸಕಾರಾತ್ಮಕ ಕಂಪನಗಳು ಉಂಟಾಗಿ ಭಕ್ತರ ಇಷ್ಟಾರ್ಥ ಕುರುಣಿಸುವ ಶಕ್ತಿಯುತ ಪವಿತ್ರ ತಾಣವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಚೇರಮನ್ ಹರ್ಷವರ್ಧನ ಅಗಡಿ ಮತ್ತು ವೈಸ್ ಚೆರಮನ್ ಗೀತಾ ಅಗಡಿಯವರು ಸಂಪ್ರದಾಯಗಳನ್ನು ನೆರವೇರಿಸಿದರು. ಅಗಡಿ ಸಂಸ್ಥೆಯ ಅಧ್ಯಕ್ಷರಾದ ಹರ್ಷವರ್ಧನ ಅಗಡಿ ದಂಪತಿಗಳು ಸೇರಿ ಕಾಲೇಜು, ಆಸ್ಪತ್ರೆ, ದೇವಸ್ಥಾನ ಕಮಿಟಿಯ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಶೃದ್ಧಾ-ಭಕ್ತಿಯಿಂದ ಪಾಲ್ಗೊಂಡಿದ್ದರು.