ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆಗಳು ಎರಡು ಕೇಂದ್ರಗಳಲ್ಲಿ ನಿರಾತಂಕವಾಗಿ ಜರುಗಿದವು. ಆದರೆ ಶಿಗ್ಲಿ ರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ ಕೊಠಡಿಗಳ ಕೊರತೆ ಕಂಡು ಬಂದಿತು.
ಈ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ 477 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಬೇಕಾಗಿತ್ತು. ಅಂದರೆ ತಲಾ 30 ವಿದ್ಯಾರ್ಥಿಗಳಿಗೆ 1 ಕೊಠಡಿಯಂತೆ 16 ಪರೀಕ್ಷಾ ಕೊಠಡಿಗಳಲ್ಲಿ ಆಸನದ ವ್ಯವಸ್ಥೆ ಆಗಬೇಕಾಗಿತ್ತು. ಆದರೆ ಈ ಕಾಲೇಜಿನಲ್ಲಿರುವುದು ಕೇವಲ 8 ಕೊಠಡಿಗಳು ಮಾತ್ರ. ಇನ್ನೂ 8 ಕೊಠಡಿಗಳ ಕೊರತೆಯನ್ನು ಸರಿದೂಗಿಸಲು ಕೇಂದ್ರದ ಅಧೀಕ್ಷಕರು ಮತ್ತು ಅಲ್ಲಿನ ಉಪನ್ಯಾಸಕರು ಮೇಲಾಧಿಕಾರಿಗಳ ನಿರ್ದೇಶನದಂತೆ ಒಂದು ಕೊಠಡಿಯಲ್ಲಿ 30ರ ಬದಲಿಗೆ 60 ವಿದ್ಯಾರ್ಥಿಗಳು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದರು.
ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಕೊಠಡಿಗಳ ಕೊರತೆಯಿಂದ ಮುಂದಿನ ಎಲ್ಲ ಪರೀಕ್ಷೆಗಳನ್ನು ನಿಭಾಯಿಸುವದು ಹೇಗೆಂಬ ಚಿಂತೆ ಕಾಡುತ್ತಿದೆ. ಇಂಗ್ಲೀಷ್ ವಿಷಯಕ್ಕೆ 500 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇಲ್ಲಿರುವ ಕೊಠಡಿಗಳಷ್ಟೇ ಅಲ್ಲದೇ ಪ್ರಯೋಗಾಲಯ, ಆಡಳಿತ ಕಚೇರಿ ಬಳಸಿದರೂ ಸಾಲುವುದಿಲ್ಲ. ಇದಕ್ಕೆ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡುವದು ಅವಶ್ಯವಾಗಿದೆ ಅಥವಾ ಮುಂದಿನ ವರ್ಷದಿಂದ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಇಲಾಖೆ ಚಿಂತನೆ ಮಾಡಲಿ ಎಂದು ಆಗ್ರಹಿಸಿದ ಪಾಲಕರು ಅವ್ಯವಸ್ಥೆ-ನಿರ್ಲಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.