ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ನ.18ರಂದು ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.
ಅವರು ದೇವಸ್ಥಾನದ ಆವರಣದಲ್ಲಿ ಸೋಮವಾರ ಲಕ್ಷ ದೀಪೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಪ್ರಚಾರ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಶ್ರೀ ಸೋಮೇಶ್ವರ ದೇವಸ್ಥಾನವನ್ನು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರು ಜೀರ್ಣೋದ್ಧಾರಗೊಳಿಸಿದ ವೇಳೆಯಲ್ಲಿ ದೇವಸ್ಥಾನ ಲೋಕಾರ್ಪಣೆಯ ನಿಮಿತ್ತ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಂದ ಪ್ರತಿ ಐದು ವರ್ಷಕ್ಕೊಮ್ಮೆ ಅದ್ಧೂರಿ ಲಕ್ಷ ದೀಪೋತ್ಸವ ಆಯೋಜಿಸಲು ನಿರ್ಧರಿಸಲಾಗಿತ್ತು. ಕಳೆದ ಬಾರಿ ಕಾರಣಾಂತರಗಳಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಿಸಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಕಾರ್ತಿಕಮಾಸದಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಲಾಗಿದ್ದು, ನ.18ರಂದು ಸೋಮವಾರ ಸಂಜೆ ಲಕ್ಷದೀಪೋತ್ಸವ ನಡೆಯಲಿದೆ. ಅಂದು ಸುಮಾರು 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಲಕ್ಷ ದೀಪೋತ್ಸವ ಕಮಿಟಿ ಖಜಾಂಚಿ ಚನ್ನಪ್ಪ ಜಗಲಿ ಮಾತನಾಡಿ, ಅಂದು ದೇವಸ್ಥಾನಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರ ಮಾಡಲಾಗುತ್ತದೆ. ಈಗಾಗಲೇ ಪಟ್ಟಣ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ದೇಣಿಗೆ ಸಲ್ಲಿಸಿದ್ದು, ಅನಾವಶ್ಯಕ ವೆಚ್ಚ ತಪ್ಪಿಸುವ ಜತೆಗೆ ಸಂಪ್ರದಾಯಕ್ಕೆ ಒತ್ತು ನೀಡಲಾಗುತ್ತಿದೆ.
ಪಾವನ ಸಾನ್ನಿಧ್ಯವನ್ನು ಮಹಾರಾಷ್ಟç ಕೊಲ್ಲಾಪುರದ ಶ್ರೀ ಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ದಿವ್ಯ ಉಪಸ್ಥಿತಿಯನ್ನು ಮುಕ್ತಿಮಂದಿರ ಧರ್ಮ ಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹಾಗೂ ಆಧ್ಯಾತ್ಮಿಕ ವಿದ್ವಾಂಸರಾದ ಮಂಗಳೂರಿನ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ ಝೈನಿ ಕಾಮೀಲ್ ಸಖಾಫಿ ವಹಿಸಿಕೊಳ್ಳುವರು. ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಮತ್ತು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ವರ್ತಕ ಬಸವೇಶ ಮಹಾಂತಶೆಟ್ಟರ ಮಾತನಾಡಿ, ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಪಕ್ಷ, ಜಾತಿ, ಧರ್ಮ ಭೇದ ಮರೆತು ಎಲ್ಲರೂ ಪಾಲ್ಗೊಳ್ಳೋಣ. ಮಠಾಧೀಶರು, ವಿಚಾರವಂತರು, ಹಿರಿಯರು, ಗಣ್ಯರು ಆಗಮಿಸಲಿದ್ದು ಎಲ್ಲರೂ ಸೇರಿ ಅದ್ಧೂರಿಯಾಗಿ ಲಕ್ಷದೀಪೋತ್ಸವ ಯಶಸ್ವಿಗೊಳಿಸೋಣ ಎಂದರು.
ಈ ವೇಳೆ ಗುರುರಾಜ ಪಾಟೀಲಕುಲಕರ್ಣಿ, ಸುರೇಶ ರಾಚನಾಯ್ಕರ್, ಶಿವಯೋಗಿ ಅಂಕಲಕೋಟಿ, ವಿರುಪಾಕ್ಷ ಆದಿ, ಮಯೂರಗೌಡ ಪಾಟೀಲ, ನಂದೀಶ ಬಂಡಿವಾಡ, ಎನ್.ಆರ್. ಸಾತಪೂತೆ, ಪ್ರಕಾಶ ಕೊಂಚಿಗೇರಿಮಠ, ಅಶೋಕಗೌಡ ಪಾಟೀಲ, ರಾಘವೇಂದ್ರ ಪೂಜಾರ, ಗಂಗಾಧರ ಉಮಚಗಿ, ರಾಜಶೇಖರಯ್ಯ ಶಿಗ್ಲಿಮಠ, ನೀಲಪ್ಪ ಕನವಳ್ಳಿ, ಬಸಣ್ಣ ಪುಠಾಣಿ, ಸೋಮಣ್ಣ ತಂಡಿಗೇರ ಸೇರಿದಂತೆ ಅನೇಕರಿದ್ದರು.
ಅಧ್ಯಕ್ಷತೆಯನ್ನ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ವಹಿಸುವರು. ಅತಿಥಿಗಳಾಗಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಸೇರಿ ಹಲವರು ಆಗಮಿಸುವರು ಎಂದುದೀಪೋತ್ಸವ ಕಮಿಟಿ ಖಜಾಂಚಿ ಚನ್ನಪ್ಪ ಜಗಲಿ ಮಾಹಿತಿ ನೀಡಿದರು.