ಲಕ್ಷ್ಮೇಶ್ವರ: ಬಡವರ ಹಸಿವು ನೀಗಿಸಬೇಕಾದ ಪಡಿತರ ವ್ಯವಸ್ಥೆಗೆ ಸರ್ವರ್ ಸಮಸ್ಯೆಯೇ ಶಾಪವಾಗಿ ಪರಿಣಮಿಸಿದೆ. ಕಳೆದ ಎರಡು ದಿನಗಳಿಂದ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಂಪರ್ಕ ಕಡಿತಗೊಂಡಿದ್ದು, ಪಡಿತರ ಪಡೆಯಲು ಫಲಾನುಭವಿಗಳು ಪರದಾಡುವಂತಾಗಿದೆ. ಕೆಲಸ ಬಿಟ್ಟು ಬಂದರೂ ಕೈಗೆ ಪಡಿತರ ಸಿಗದೆ ಬರಿಗೈಯಲ್ಲಿ ಮರಳುವ ಸ್ಥಿತಿ ನಿರ್ಮಾಣವಾಗಿದೆ.
ತಿಂಗಳ 20ನೇ ತಾರೀಖಿನ ನಂತರ ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯ ಪೂರೈಕೆಯಾಗುತ್ತಿದ್ದು, ದಾಸ್ತಾನು ಬಂದ ಬಳಿಕ ವಿತರಣೆ ಆರಂಭವಾಗುತ್ತದೆ. ಆದರೆ, ಸರ್ವರ್ ಸಮಸ್ಯೆಯಿಂದ ವಿತರಣೆಗೆ ಮತ್ತೆ ಅಡ್ಡಿಯಾಗುತ್ತಿದೆ. ತಿಂಗಳ 30ರೊಳಗೆ ವಿತರಣೆ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಫಲಾನುಭವಿಗಳ ಆತಂಕ ಹೆಚ್ಚಿಸಿದೆ.
ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಒಟ್ಟು 45 ಸಾವಿರ ಪಡಿತರ ಚೀಟಿಗಳಿದ್ದು, ಪ್ರಸ್ತುತ ಶೇ.50ರಷ್ಟು ಪಡಿತರ ವಿತರಣೆ ಬಾಕಿಯಿದೆ. ಎರಡು ದಿನಗಳಿಂದ ಸರ್ವರ್ ಸಮಸ್ಯೆಯಿಂದ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಆಹಾರ ನಿರೀಕ್ಷಕ ಎನ್.ಐ. ಅಡಿವೆಣ್ಣನವರ ತಿಳಿಸಿದ್ದಾರೆ. ಸಮಸ್ಯೆ ಪರಿಹರಿಸುವಂತೆ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಕಚೇರಿಯ ತಾಂತ್ರಿಕ ವಿಭಾಗದ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ದಿನಗೂಲಿ ಕಾರ್ಮಿಕರು, ವೃದ್ಧರು ಹಾಗೂ ಮಹಿಳೆಯರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಕಾಯುವಂತಾಗಿದೆ. ಪ್ರತಿದಿನ ಅಂಗಡಿಗೆ ಅಲೆದಾಡುವುದೇ ದೊಡ್ಡ ಸಂಕಷ್ಟವಾಗಿದೆ.
ಫಲಾನುಭವಿಗಳ ಒತ್ತಾಯ
ಪ್ರತಿ ತಿಂಗಳೂ ಇದೇ ಸಮಸ್ಯೆ ಮರುಕಳಿಸುತ್ತಿದೆ. ಸಕಾಲಕ್ಕೆ ದಾಸ್ತಾನು ಪೂರೈಸುವುದರ ಜತೆಗೆ ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನಿಗದಿತ ಅವಧಿಯಲ್ಲಿ ಪಡಿತರ ಪಡೆಯಲಾಗದವರಿಗೆ ವಂಚನೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು.










