ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಧರ್ಮದ ವಿಚಾರದಲ್ಲಿ ದೀಪವು ಕೂಡ ಮಹತ್ವ ಪಾತ್ರವನ್ನು ವಹಿಸಿದೆ. ಜೀವನದ ಅಂಧಕಾರವನ್ನು ಹೊಡೆದೋಡಿಸಿ ದೇವರ ಸಾನ್ನಿಧ್ಯಕ್ಕೆ ಒಯ್ಯಲು ಜ್ಯೋತಿಯ ಅವಶ್ಯಕತೆ ಇದೆ. ಆ ಜ್ಯೋತಿಯು ಪ್ರತಿಯೊಂದು ಹಂತದಲ್ಲಿಯೂ ಕೂಡ ಮನುಷ್ಯನನ್ನು ಮಹಾದೇವನನ್ನಾಗಿ ಮಾಡುತ್ತದೆ ಎಂದು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಶ್ರೀ ಜಗದ್ಗುರು ದಾರುಕಾಚಾರ್ಯ ಬೃಹನ್ಮಠದ ಕಾರ್ತಿಕ ದೀಪೋತ್ಸವದ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನಸ್ಸಿನಲ್ಲಿರುವ ಅಂಧಕಾರವನ್ನು ದೇವರ ಸಹಾಯಕ್ಕೆ ತಂದು ದೀಪವನ್ನು ಹಚ್ಚುವುದರಿಂದ ಮನಸ್ಸಿನ ಬೆಳಕು ಶಾಂತವಾಗಿ ಪ್ರಜ್ವಲಿಸುತ್ತದೆ. ಅದು ನಿರಂತರವಾಗಿ ಇರಬೇಕೆಂದರೆ ನಾವು ದೇವರ ಸ್ಮರಣೆ, ಅರ್ಚನೆ, ಧ್ಯಾನ ಇವೆಲ್ಲವನ್ನೂ ಕೂಡ ಮಾಡಬೇಕಾಗುತ್ತದೆ. ಜೀವನ ಶಾಶ್ವತವಲ್ಲ. ಆ ಜೀವನಕ್ಕೆ ಒಂದು ಆಯಾಮವನ್ನು ನೀಡುವಂತಹ ಸ್ಥಿತಿ ನಮ್ಮ ಮನಸ್ಸಿನ ಪರಿವರ್ತನೆಗೆ ಕಾರಣವಾಗುತ್ತದೆ. ದೀಪದ ಬೆಳಕಿನ ಮುಖಾಂತರ ಒಳ್ಳೆಯ ಮನಸ್ಸಿನ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನರಸಾಪುರದ ವೀರಭದ್ರ ದೇಶಕರು, ನಾರಾಯಣಪೂರ, ಬನ್ನಿಕೊಪ್ಪ ಹಾಗೂ ಹಡಗಲಿ ಭಾವನೂರ ಗ್ರಾಮಗಳ ಸಮಸ್ತ ಭಕ್ತರು, ಭಜನಾ ಸಂಘದವರು ಉಪಸ್ಥಿತರಿದ್ದರು.



