ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಣ ಸೇವೆ ದೇವರ ಸೇವೆಯಾಗಿದ್ದು, ಈ ಸೇವಾ ಭಾಗ್ಯ ಪಡೆದ ಶಿಕ್ಷಕರು ಸದಾ ಗೌರವಾರ್ಹರು. ಕಲಿಯುವುದು-ಕಲಿಸುವುದು ನಿರಂತರ ಪ್ರಕ್ರಿಯೆಯಾಗಿದ್ದು, ನಿವೃತ್ತಿ ನಂತರವೂ ಶಿಕ್ಷಕರು ಮಕ್ಕಳಿಗೆ ಜ್ಞಾನ ಹಂಚುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಪಟ್ಟಣದ ಎಪಿಎಂಸಿ ವರ್ತಕರ ಸಭಾ ಭವನದಲ್ಲಿ ಶಿಕ್ಷಕ ಸಮುದಾಯದಿಂದ ಗದಗ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಅಡರಕಟ್ಟಿಯ ಎಂ.ಎಂ. ಹವಳದ ಅವರ ನಿವೃತ್ತಿಯ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಶಿಕ್ಷಕರು ಶ್ರೇಷ್ಠ ಶಿಷ್ಯರನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು. 3 ದಶಕಗಳು ಶಿಕ್ಷಕ ವೃತ್ತಿಯಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಅನುಭವ ಇರುವ, ಅದರಲ್ಲೂ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟವಾದ ಸೇವೆ ಸಲ್ಲಿಸಿದ ಶಿಕ್ಷಕರಾದ ಎಂ.ಎಂ. ಹವಳದ ಅವರು ಮುಂದೆಯೂ ಮಕ್ಕಳಿಗೆ ಮಾರ್ಗದರ್ಶನ ಮಾಡುವುದನ್ನು ಮುಂದುವರಿಸಬೇಕು ಎಂದರು.
ಡಿಡಿಪಿಐ ಆರ್.ಎಸ್. ಬುರಡಿ, ಬಿಇಓ ಹೆಚ್. ನಾಣಕಿನಾಯ್ಕ್ ಮಾತನಾಡಿ, ದೈಹಿಕ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾಗಿರುವ ಎಂ.ಎಂ. ಹವಳದರು ನಿವೃತ್ತಿಯ ನಂತರವೂ ಮಕ್ಕಳ ಶ್ರೇಯೋಭಿವೃದ್ಧಿ, ಶೈಕ್ಷಣಿಕ ಪ್ರಗತಿಗಾಗಿ ತಮ್ಮ ಅಮೂಲ್ಯವಾದ ಸೇವೆ, ಸಲಹೆ-ಸಹಕಾರ ನೀಡಬೇಕು ಎಂದರು.
ಈ ವೇಳೆ ಬಿಇಓ ವಿ.ವಿ. ನಡುವಿನಮನಿ, ಕ್ಷೇತ್ರ ಸಮನ್ಯಯಾಧಿಕಾರಿ ಬಿ.ಎಸ್. ಭಜಂತ್ರಿ, ನೌಕರ ಸಂಘದ ತಾಲೂಕಾಧ್ಯಕ್ಷ ಗುರುರಾಜ ಹವಳದ, ಬಿ.ಎಸ್. ಹರ್ಲಾಪುರ, ಈಶ್ವರ ಮೆಡ್ಲೇರಿ. ಎಂ.ಎಸ್. ಕೂಬ್ಯಾಳ, ಎಸ್.ಸಿ. ಗೋಲಪ್ಪನವರ, ಹೆಚ್.ಎಂ. ಮುಳಗುಂದ, ಎಂ.ಆರ್. ಹವಳದ, ಸಿ.ಜೆ. ಹಿರೇಮಠ, ಎ.ಎಚ್. ಇಚ್ಚಂಗಿ, ಸಿ.ಎಸ್. ನೇಕಾರ, ಸತೀಶ ಬೋಮಲೆ, ಬಿ.ಎಂ. ಕುಂಬಾರ, ಆರ್. ಮಾಂತೇಶ, ಎಂ.ಎ. ನದಾಫ್, ಎಂ.ಆಯ್. ಕಣಿಕೆ, ಬಿ.ಎಂ. ಯರಗುಪ್ಪಿ, ಸಾಂಬಯ್ಯ ಹಿರೇಮಠ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು. ಶಿಷ್ಯ ಬಳಗದವರು ಹವಳದ ದಂಪತಿಗಳನ್ನು ಸನ್ಮಾನಿಸಿದರು.