ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಡವ ಬಲ್ಲಿದ ಎನ್ನದೆ ಕಾನೂನು ಎಲ್ಲರಿಗೂ ಒಂದೇ ಆಗಿದೆ. ನಿತ್ಯ ಜೀವನಕ್ಕೆ ಬೇಕಾದ ಕಾನೂನಿನ ಸಾಮಾನ್ಯ ತಿಳುವಳಿಕೆ ಎಲ್ಲರಿಗೂ ಅಗತ್ಯವಾಗಿದೆ ಎಂದು ಮುಖ್ಯ ಪೊಲೀಸ್ ಪೇದೆ ಮಾಲತಿ ಶೀಗಿಹಳ್ಳಿ ಹೇಳಿದರು.
ಅವರು ಪಟ್ಟಣದ ಪುರಸಭೆಯ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಹೊಸ ಬಿಎನ್‌ಎಸ್ ಕಾಯ್ದೆಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಹೆಣ್ಣುಮಕ್ಕಳಿಗಾಗಿ ಅನೇಕ ಕಾನೂನುಗಳಿದ್ದು, ಆ ಬಗ್ಗೆ ತಿಳಿದುಕೊಳ್ಳಬೇಕು. ಮನೆಯ ಹತ್ತಿರ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದರೆ 112 ಸಂಖ್ಯೆಗೆ ಕರೆ ಮಾಡಬೇಕು. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಬಿಎನ್‌ಎಸ್ 64 ಅಡಿಯಲ್ಲಿ ದೂರು ದಾಖಲು ಆಗುತ್ತಿದ್ದು, ಮನೆಯಲ್ಲಿ ಬಾಲ್ಯ ವಿವಾಹಕ್ಕೆ ಯತ್ನಿಸಿದಾಗ ಅದನ್ನು ತಡೆಯಬೇಕು. ಸೈಬರ್ ಅಪರಾದಗಳ ಬಗ್ಗೆಯೂ ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.
ಇನ್ನೊರ್ವ ಮುಖ್ಯ ಪೇದೆ ರಾಜು ಯರಗಟ್ಟಿ ಮಾತನಾಡಿ, ಜನ ಸಾಮಾನ್ಯರಿಗೆ ಅನೇಕ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅನೇಕ ಘಟನೆಗಳಿಗೆ ಕಾರಣವಾಗುತ್ತಿದ್ದಾರೆ. ಕಾನೂನುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಮೂಡಿದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಬಹುದಾಗಿದೆ. ಅದರಲ್ಲೂ ಮಹಿಳೆಯರಿಗಾಗಿ ವಿಶೇಷ ಕಾನೂನುಗಳಿದ್ದು, ವಿದ್ಯಾರ್ಥಿನಿಯರು ಅದನ್ನು ತಿಳಿದುಕೊಂಡು ಜಾಗೃತಿ ಮೂಡಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ವ್ಹಿ.ಎನ್. ನಾಗಶೆಟ್ಟಿ, ಮುಖ್ಯ ಪೊಲೀಸ್ ಪೇದೆ ಚನ್ನಬಸಯ್ಯ ಮಠಪತಿ ಸೇರಿದಂತೆ ಅನೇಕರಿದ್ದರು.