ಬೆಂಗಳೂರು: ನಗರದ ಬನಶಂಕರಿ 5ನೇ ಹಂತದ 2ನೇ ಬ್ಲಾಕ್ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಸೆ.9ರ ಬೆಳಗಿನ ಜಾವ ಸುಮಾರು 4 ಗಂಟೆಗೆ ಮನೆಯೊಂದರ ಮುಂದೆ ಚಿರತೆ ಓಡಾಡಿದ್ದು, ಅಲ್ಲಿದ್ದ ನಾಯಿಗಳ ಮೇಲೆ ದಾಳಿ ಮಾಡಲು ಯತ್ನಿಸಿದೆ ಎನ್ನಲಾಗಿದೆ. ಚಿರತೆಯ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆಯೊಂದರ ಮುಂದೆ ಚಿರತೆ ಓಡಾಡುತ್ತಿರುವುದು ಹಾಗೂ ನಾಯಿಗಳತ್ತ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬೆಳಗಿನ ಜಾವ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ.
ಇದೇ ಪ್ರದೇಶದಲ್ಲಿ ಈ ಹಿಂದೆ ಜುಲೈ ತಿಂಗಳಲ್ಲೂ ಚಿರತೆ ಕಾಣಿಸಿಕೊಂಡಿತ್ತು. ಅಂದು ಪಟಾಕಿ ಸಿಡಿಸಿ ಚಿರತೆಯನ್ನು ಕಾಡಿನತ್ತ ಓಡಿಸಲಾಗಿತ್ತು ಎನ್ನಲಾಗಿದೆ. ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಚಿರತೆ ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದ್ದು, ಚಿರತೆಯ ಚಲನವಲನದ ಬಗ್ಗೆ ನಿಗಾ ವಹಿಸುವ ಅಗತ್ಯ ಎದುರಾಗಿದೆ.



