ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ದೂರದೃಷ್ಟಿ ಮತ್ತು ಸಂಕಲ್ಪಿತ ಶಕ್ತಿಯಿಂದ ಸ್ಥಾಪನೆಯಾಗಿದೆ. ಶಾಲೆ ಪ್ರಾರಂಭಗೊಂಡು ಮೂರು ದಶಕಗಳು ಕಳೆಯುತ್ತ ಬಂದಂತೆ ಶ್ರೀಗಳವರ ದೂರದೃಷ್ಟಿಯ ಫಲ ಈಗ ಸಮಾಜಕ್ಕೆ ದೊರಕುತ್ತಿದೆ ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕಲಾ ಸಂಭ್ರಮ-೨೦೨೪ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಈ ಶಾಲೆಯಲ್ಲಿ ಅಭ್ಯಸಿಸಿದ ಮಕ್ಕಳು ಪ್ರತಿಭಾ ಸಂಪನ್ನರಾಗಿ, ಸಾಧಕರಾಗಿ ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಲಿಕೆ, ಕ್ರೀಡೆ ಹೀಗೆ ಮಕ್ಕಳ ಆಸಕ್ತಿ-ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡುವುದರ ಜತೆಗೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸ ಶಿಕ್ಷಕರು ಹಾಗೂ ಪಾಲಕರಿಂದ ಆಗಬೇಕು ಎಂದು ತಿಳಿಸಿದರು.
ಸರಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಜ ಗುರಿಕಾರ ಉಪನ್ಯಾಸ ನೀಡಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಮಲ್ಲಿಕಾರ್ಜುನಪ್ಪ ಮೆಣಸಗಿ, ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿ, ಪ್ರಾಚಾರ್ಯ ವೈ.ಸಿ. ಪಾಟೀಲ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಸ್.ವಿ. ಹಿರೇಮಠ, ವಿ.ಪಿ. ಗ್ರಾಮಪೂರೋಹಿತ, ಎಸ್.ಕೆ. ಕುಲಕರ್ಣಿ, ಎಂ.ವಿ. ಕಡೆತೋಟದ, ವಿ.ಎಸ್. ಜಾಧವ, ಎಸ್.ಎಚ್. ಮಾನ್ವಿ, ಗೀತಾ ಶಿಂಧೆ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ಅಕ್ಕಮಹಾದೇವಿ, ಗೀತಾ ಕಂಬಳಿ, ರಜಿಯಾ ಬೇಗಂ, ಮಲ್ಲಮ್ಮ ಸಿಳ್ಳಿನ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ನಯನಾ ಜೋಳದ, ವೀಣಾ ಯಾಳಗಿ ಸೇರಿದಂತೆ ವಿದ್ಯಾರ್ಥಿಗಳೆಲ್ಲರೂ ಸೇರಿ ಸಂಭ್ರಮಿಸಿದರು.
ಸಮಾರಂಭವನ್ನು ಶಾಲೆಯ ಚೇರಮನ್, ಖ್ಯಾತ ವೈದ್ಯ ಡಾ. ಜಿ.ಕೆ. ಕಾಳೆ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಗುವಿನಲ್ಲಿಯೂ ಒಂದು ವಿಶಿಷ್ಠವಾದ ಪ್ರತಿಭೆ ಇರುತ್ತದೆ. ಇದನ್ನು ಪ್ರೋತ್ಸಾಹಿಸಿದಾಗ ಮಾತ್ರ ಅವರಲ್ಲಿರುವ ಪ್ರತಿಭೆ ಇನ್ನಷ್ಟು ಹೊರ ಹೊಮ್ಮಲು ಸಾಧ್ಯ ಎಂದು ಹೇಳಿದರು.