ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ |
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||
ನಾವು ಹಚ್ಚುವ ದೀಪದ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟಗುಣಗಳು ನಾಶವಾಗಿ ಸದ್ಗುಣಗಳು ಹೆಚ್ಚಲಿ, ಎಲ್ಲೆಡೆ ಶಾಂತಿ, ಸಮೃದ್ಧಿ ನೆಲೆಸಲಿ. ದೀಪದಲ್ಲಿ ದೇವರ ರೂಪ ಕಾಣಿಸಲಿ ಎಂದು ಆಶಿಸುತ್ತಾ ದೀಪಗಳಿಗೆ ನಮಸ್ಕರಿಸಬೇಕು ಎಂಬ ಅರ್ಥವನ್ನು ಈ ಶ್ಲೋಕವು ಒಳಗೊಂಡಿದೆ.
ಎಲ್ಲರ ಬದುಕಿನಲ್ಲಿ ಬೆಳಕಿಗೆ ಅದರದೇ ಆದ ಮಹತ್ವವಿದೆ. ಅಂತರಂಗದ ಬೆಳಕು ನಮ್ಮ ಜೀವನಕ್ಕೆ ದಾರಿ ತೋರಿದರೆ ಬಹಿರಂಗದ ಬೆಳಕು ಜಗತ್ತನ್ನು ಕಾಣಲು, ಅನುಭವಿಸಲು ನೆರವಾಗುತ್ತದೆ. ಬೆಳಕೆಂದರೆ ಜ್ಞಾನ, ಅರಿವು, ತಿಳುವಳಿಕೆಯಾಗಿದೆ. ದೀಪ ಮತ್ತು ಅವಳಿ ಎಂಬೆರಡು ಪದದಿಂದ ದೀಪಾವಳಿ ಎಂದಾಗಿದೆ. ದೀಪ ಎಂದರೆ ಹಣತೆ, ಬೆಳಕು. ಅವಳಿ ಎಂದರೆ ಸಾಲು ಎಂದರ್ಥ. ಸಾಲು ಸಾಲಾಗಿ ದೀಪಗಳನ್ನಿಟ್ಟು ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿಯಾಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಮನೆಗಳನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣಗಳಿಂದ ಅಲಂಕರಿಸುತ್ತಾರೆ. ಮನೆಯ ಬಾಗಿಲಿಗೆ ಮಾವಿನ ತೋರಣ, ವಿವಿಧ ಹೂವುಗಳಿಂದ ಶೃಂಗರಿಸುತ್ತಾರೆ. ಅಂಗಳದಲ್ಲಿ ವಿವಿಧ ಬಣ್ಣಗಳಿಂದ ಚೆಲುವಿನ ಚಿತ್ತಾರದ ರಂಗವಲ್ಲಿಯ ಬಿಡಿಸಿ ಹರ್ಷಿಸುತ್ತಾರೆ. ನಮ್ಮ ಜೀವನದ ಅವಿಭಾಜ್ಯ ಅಂಗವಾದ ಗೋವುಗಳನ್ನು ಪೂಜಿಸುತ್ತಾರೆ. ಗೃಹಿಣಿಯರು ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸಿ ಬಂಧು-ಬಾಂಧವರಿಗೆ ಹಂಚುತ್ತಾರೆ. ಮಕ್ಕಳು ಹೊಸಬಟ್ಟೆ ತೊಟ್ಟು ಪಟಾಕಿ ಹಾರಿಸಿ ಸಂಭ್ರಮಿಸುತ್ತಾರೆ. ಎಲ್ಲರ ಮನೆಗಳಲ್ಲೂ ವಿವಿಧ ಬಣ್ಣದ, ವಿವಿಧ ಆಕಾರದ ಆಕಾಶಬುಟ್ಟಿಗಳು ನೋಡುಗರ ಕಣ್ಮನ ಸೆಳೆಯುತ್ತವೆ.
ದೀಪಾವಳಿಯ ಹಬ್ಬದ ಮೊದಲನೇ ದಿನ ಕಾರ್ತಿಕ ಮಾಸದ ಧನತ್ರಯೋದಶಿಯಂದು ರಾತ್ರಿ ನೀರು ತುಂಬುವ ಹಬ್ಬ ಆಚರಿಸುತ್ತಾರೆ. ಮನೆಗಳಲ್ಲಿನ ನೀರು ತುಂಬಲು ಉಪಯೋಗಿಸುವ ಕೊಡ, ಹಂಡೆ ಮುಂತಾದ ಪರಿಕರಗಳನ್ನು ಸ್ವಚ್ಛಗೊಳಿಸಿ ಪೂಜೆ ಮಾಡುತ್ತಾರೆ. ಮರುದಿನ ನರಕ ಚತುರ್ದಶಿ. ಅಂದು ಶ್ರೀ ಕೃಷ್ಣ ಪರಮಾತ್ಮನು ದುಷ್ಟ ನರಕಾಸುರನನ್ನು ಸಂಹರಿಸಿ ಬಂಧಿತರಾಗಿದ್ದ 16,000 ಸ್ತ್ರೀಯರನ್ನು ಸೆರೆವಾಸದಿಂದ ಬಿಡಿಸಿಕೊಂಡು ಬಂದ ದಿನವಾಗಿದೆ. ಇದು ನರಕಾಸುರನ ಅಸುರೀಗುಣದ ಮೇಲೆ ದೈವತ್ವದ ವಿಜಯದ ಸಂಕೇತವಾಗಿ ಆಚರಿಸುವ ದಿನ. ಅಂದು ಸೂರ್ಯೋದಯಕ್ಕೆ ಮುಂಚೆಯೇ ಮನೆ ಮಂದಿಯೆಲ್ಲ ಆರತಿ ಮಾಡಿಸಿಕೊಂಡು ದೇವಾಲಯಕ್ಕೆ ತೆರಳಿ ಗುರು ಹಿರಿಯರ ದರ್ಶನ ಪಡೆಯುತ್ತಾರೆ.
ನಂತರದ ದಿನ ದೀಪಾವಳಿ ಅಮವಾಸ್ಯೆ. ಅಮವಾಸ್ಯೆಯಂದು ಮನೆ ಹಾಗೂ ಅಂಗಡಿಗಳಲ್ಲಿ ಭಾಗ್ಯದೇವತೆಯಾದ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಲಕ್ಷ್ಮೀ ದೇವಿಯು ಧನ-ಧಾನ್ಯ, ವಿದ್ಯೆ, ಸಂತಾನ, ವಿಜಯ, ಆರೋಗ್ಯ, ಶಾಂತಿ ಹಾಗೂ ಬಲದ ಪ್ರತೀಕವಾಗಿದ್ದಾಳೆ. ಈ ಎಲ್ಲ ಶಕ್ತಿಗಳನ್ನು ಕರುಣಿಸಲೆಂದು ಎಲ್ಲರೂ ಲಕ್ಷ್ಮೀದೇವಿಯನ್ನು ಭಕ್ತಿಭಾವಗಳಿಂದ ನಿರ್ಮಲಚಿತ್ತರಾಗಿ ಪೂಜಿಸುತ್ತಾರೆ. ಮರುದಿನ ಬಲಿಪಾಡ್ಯಮಿ. ವಾಮನರೂಪ ಶ್ರೀ ಹರಿಯು ಬಲಿ ಚಕ್ರವರ್ತಿಯನ್ನು ಪಾತಾಳಲೋಕಕ್ಕೆ ಕಳುಹಿಸಿದ್ದರ ಪ್ರತೀಕವಾಗಿ ಬಲಿಪಾಡ್ಯ ಆಚರಿಸುತ್ತಾರೆ. ತದನಂತರ ಹೀಗೆ ಭಾವಬಿದಿಗೆ, ಅಕ್ಕನ ತದಿಗೆ, ಅಮ್ಮನ ಚವತಿ, ಕಡೆಯ ಪಂಚಮಿ ಎಂದು ಒಂದೊಂದು ದಿನ ಒಂದೊಂದು ರೀತಿ ಹಬ್ಬ ಆಚರಿಸುತ್ತಾರೆ.
ದೀಪಾವಳಿಯು ಬಡವ, ಬಲ್ಲಿದ, ಚಿಕ್ಕವರು, ದೊಡ್ಡವರೆನ್ನುವ ಬೇಧಭಾವವಿಲ್ಲದೇ ಸಂತೋಷದಿಂದ ಆಚರಿಸುವ ಹಬ್ಬವಾಗಿದೆ. ದೀಪಾವಳಿಯು ಬದುಕಿನ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ಸರ್ವರಿಗೂ ನೀಡಲಿ. ಪರಿಸರ ಪ್ರೇಮಿ ಪಟಾಕಿ ಹಾರಿಸುವ ಮೂಲಕ ಪರಿಸರ ಸಂರಕ್ಷಿಸುವುದು ಎಲ್ಲ ಕರ್ತವ್ಯವಾಗಲಿ. ಯಾಂತ್ರಿಕ ಬದುಕಿನ ಒತ್ತಡವನ್ನು ಬದಿಗಿಟ್ಟು ಹಬ್ಬ-ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಮನೋಭಾವನೆ ಸರ್ವರಲ್ಲಿ ಬರಲಿ. ಮನುಕುಲ ಶಾಂತಿಯಿAದ ಬದುಕುವಂತೆ ಭಗವಂತನು ಅನುಗ್ರಹಿಸಲಿ.
– ಅಂಜನಾ ರಾಘವೇಂದ್ರ ಕುಬೇರ.
ಗದಗ.