ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸರ್ದಾರ್ ವಲ್ಲಭಭಾಯಿ ಪಟೇಲರು ಈ ದೇಶ ಕಂಡ ಅಪ್ರತಿಮ ದೇಶಪ್ರೇಮಿ. ಅವರ ದೇಶಪ್ರೇಮ ಇಂದಿಗೂ ಆದರ್ಶನೀಯ ಎಂದು ಎಂಪಿಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಕುರಿ ಹೇಳಿದರು.
ಶಾಲೆಯಲ್ಲಿ ಗುರುವಾರ ಆಚರಿಸಲಾದ ಸರ್ದಾರ್ ವಲ್ಲಭಭಾಯಿ ಪಟೇಲರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಾನಂತರದ ಅವರ ದಿಟ್ಟ ನಿರ್ಧಾರಗಳು ಅವರಿಗೆ ಉಕ್ಕಿನ ಮನುಷ್ಯ ಎಂಬ ಬಿರುದನ್ನು ತಂದುಕೊಟ್ಟವು. ದೇಶ ಸ್ವಾತಂತ್ರ್ಯವಾದರೂ ಇನ್ನೂ ಹಾಗೇ ಉಳಿದಿದ್ದ ಅನೇಕ ಸಂಸ್ಥಾನಗಳನ್ನು ದೇಶದಲ್ಲಿ ಐಕ್ಯಗೊಳಿಸಿದ ಮಹಾನ್ ದೂರದೃಷ್ಟಿಯ ನಾಯಕ ಅವರಾಗಿದ್ದರು. ದೇಶ ಯಾವ ಮಾರ್ಗದಲ್ಲಿ ಸಾಗಿದರೆ ಅಭಿವೃದ್ಧಿಯತ್ತ ಸಾಗುತ್ತದೆ ಎಂಬುದರ ಬಗ್ಗೆ ಅವರಲ್ಲಿಯೂ ಅನೇಕ ಕನಸುಗಳಿದ್ದವು. ಆ ಕಸನುಗಳನ್ನು ಸಾಕಾರಗೊಳಿಸಲು ಅವರು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಇಂದಿನ ಮಕ್ಕಳು ಮತ್ತು ಯುವಕರು ಅವರಂತೆ ದೇಶ ಪ್ರೇಮವನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆಯನ್ನು ಕೊಡಬೇಕಿದೆ ಎಂದು ಬಸವರಾಜ ಕುರಿ ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಏಕತಾ ಮಂತ್ರದ ಪ್ರಮಾಣ ವಚನವನ್ನು ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು ಉಪಸ್ಥಿತರಿದ್ದರು.