HomeGadag Newsಸಂವಿಧಾನದಿಂದ ಬದುಕು ಬದಲಾವಣೆ, ಸಮಾನತೆಗೆ ಹೋರಾಟ ಅಗತ್ಯ - ಶಾಸಕ ಕೆ. ನೇಮಿರಾಜ್ ನಾಯ್ಕ

ಸಂವಿಧಾನದಿಂದ ಬದುಕು ಬದಲಾವಣೆ, ಸಮಾನತೆಗೆ ಹೋರಾಟ ಅಗತ್ಯ – ಶಾಸಕ ಕೆ. ನೇಮಿರಾಜ್ ನಾಯ್ಕ

For Dai;y Updates Join Our whatsapp Group

Spread the love

ಹಗರಿಬೊಮ್ಮನಹಳ್ಳಿ: ಅಂಬೇಡ್ಕರ್ ಅವರು ಅನುಭವಿಸಿದ ಅನ್ಯಾಯ, ಅಪಮಾನ ಹಾಗೂ ಶೋಷಣೆಯ ನಡುವೆ ತಮ್ಮ ಅಧ್ಯಯನ ಮತ್ತು ಪರಿಶ್ರಮದಿಂದ ಸಂವಿಧಾನ ರೂಪಿಸಿ ಸಮಾಜದ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ. ಆದರೂ ಸಮಾನತೆ ಸಂಪೂರ್ಣವಾಗಿ ಸಾಧಿಸಲು ಇನ್ನೂ ಹೋರಾಟ ಅಗತ್ಯವಾಗಿದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ರಾಮನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿಯ ಹರಿಕಾರರಾಗಿದ್ದು, ದೀನ–ದಲಿತ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಹೋರಾಡಿದ ಮಹನೀಯರು ಎಂದು ಹೇಳಿದರು.

ತಾಲೂಕು ದಂಡಾಧಿಕಾರಿ ಕವಿತಾ ಆರ್, ಮಾತನಾಡಿ, ಸಂವಿಧಾನವು ಪ್ರತಿಯೊಬ್ಬರ ಬದುಕಿಗೆ ದಿಕ್ಸೂಚಿಯಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪಾಲಯ್ಯ ವಿಶ್ವನಾಥ ಅವರು ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಅವರ ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಗದ್ದಿಕೆರೆ ದೊಡ್ಡ ಬಸಪ್ಪ ಮಾತನಾಡಿ, ಮೀಸಲಾತಿ ಪರಿಕಲ್ಪನೆಯ ಮೂಲಕ ದೀನ–ದಲಿತ ವರ್ಗಗಳಿಗೆ ರಾಜಕೀಯ ಹಾಗೂ ಆಡಳಿತ ಕ್ಷೇತ್ರದಲ್ಲಿ ಅವಕಾಶ ದೊರಕಿದ್ದು, ಇಂತಹ ಮಹನೀಯರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ಅವರು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ 2025–26ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ಬಜಾರ್ ಮುಖ್ಯ ಬೀದಿಗಳಲ್ಲಿ ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಅವರ ಭಾವಚಿತ್ರಗಳನ್ನು ಹೊತ್ತ ಬೆಳ್ಳಿ ರಥದಲ್ಲಿ ತಾಳ–ಮದ್ದಲೆ ಹಾಗೂ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಶಾರದಾ ಮತ್ತು ಸೋಮನಾಥ ತಂಡದಿಂದ ಪ್ರಾರ್ಥನೆ ಹಾಗೂ ರೈತ ಗೀತೆಗಳು, ಮಾಂತೇಶ್ ಕಲಾ ತಂಡದಿಂದ ಅಂಬೇಡ್ಕರ್ ಕುರಿತ ಹಾಡುಗಳು ಗಮನಸೆಳೆಯುವಂತಾಗಿದ್ದವು.

ಕಾರ್ಯಕ್ರಮದಲ್ಲಿ ವೃತ್ತ ಪೊಲೀಸ್ ನಿರೀಕ್ಷಕ ವಿಕಾಸ್ ಲಮಾಣಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬದಾಮಿ ಮೃತ್ಯುಂಜಯ, ಕಾಂಗ್ರೆಸ್ ಮುಖಂಡ ಹೆಗ್ಡಾಳ್ ರಾಮಣ್ಣ, ಆನಂದಳ್ಳಿ ಪ್ರಭಾಕರ, ದಲಿತ ಮುಖಂಡ ಎ. ಮಹೇಶ್, ಪುರಸಭೆ ಸದಸ್ಯ ಗಣೇಶ್, ವಕೀಲ ಸಿ. ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಸ್ತಾವನೆ ಪಠಣದ ವಿಚಾರವಾಗಿ ಕ್ಷಣಿಕ ಗೊಂದಲ ಉಂಟಾದರೂ, ಬಳಿಕ ಅದನ್ನು ಸರಿಪಡಿಸಿ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ತೀವ್ರ ಬಿಸಿಲಿನ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ತಾಲೂಕು ರೆಡ್ಡಿ ಸಂಘದ ಬಸವರಾಜ್ ರೆಡ್ಡಿ ಅವರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಗಮನಾರ್ಹವಾಗಿತ್ತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!