ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಎನ್.ಎಸ್. ಬೋಸರಾಜು ಸ್ಪಷ್ಟಪಡಿಸಿದ್ದಾರೆ.
ಪಕ್ಷದೊಳಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಕಿಡಿಕಾರಿದ ಅವರು, “ಯಾರು ಏನೇ ಹೇಳಿದ್ರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು” ಎಂದು ತೀವ್ರವಾಗಿ ಹೇಳಿಕೆ ನೀಡಿದ್ದಾರೆ.
“ನಾನು 25 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವಾಗಲೂ ಹುದ್ದೆ ಬೇಡಿಕೊಂಡಿಲ್ಲ. ಫೋನ್ ಮಾಡಿದ್ರು ಬಂದು ಮಂತ್ರಿಯಾದೆ. ಪಕ್ಷ ಶಿಸ್ತಿನ ಸಂಸ್ಥೆ; ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ನಾವು ಬದ್ಧರಾಗಿರಬೇಕು” ಎಂದು ಬೋಸರಾಜು ಹೇಳಿದರು.
ಇತ್ತೀಚೆಗೆ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಕುರಿತು ಸಚಿವರು ಮತ್ತು ನಾಯಕರಿಂದ ಬರುವ ಹೇಳಿಕೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, “ಪಕ್ಷದ ಶಿಸ್ತಿಗೆ ಧಕ್ಕೆ ಬಾರದಂತೆ ಎಲ್ಲರೂ ಮಾತನಾಡದೆ ಕೆಲಸ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಕೂಡಾ ಬಿಜೆಪಿ ತರಹ ಬಣಗಳಾಗಿ ಬಿಡುತ್ತದೆ” ಎಂದು ಎಚ್ಚರಿಸಿದರು.
ಬಿಜೆಪಿಯನ್ನು ಉಲ್ಲೇಖಿಸಿದ ಅವರು, “ಅಶೋಕ್, ವಿಜಯೇಂದ್ರ, ಜೋಷಿ ಬಣಗಳಂತಾಗಬಾರದು. ಹೈಕಮಾಂಡ್, ಸಿಎಂ, ಡಿಸಿಎಂ ಹೇಳಿದ ಹಾಗೆ ಕೇಳಬೇಕು. ಜನರು ಅಧಿಕಾರ ಕೊಟ್ಟಿರೋದು ಜನ ಸೇವೆಗೆ. ಹೈಕಮಾಂಡ್ ಸಮಯ ಬಂದಾಗ ತೀರ್ಮಾನ ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು.



