ವಿಜಯಸಾಕ್ಷಿ ಸುದ್ದಿ, ಮಂಡ್ಯ: ಸಾಹಿತ್ಯ ಕ್ಷೇತ್ರಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ ಉತ್ಕೃಷ್ಟವಾದದ್ದು. ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸಮಗ್ರ ಕನ್ನಡ ಭಾಷಾ ಬಳಕೆಯನ್ನು ಜಾರಿಗೆ ತಂದಿದ್ದೇವೆ. ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿದುಕೊಳ್ಳಬೇಕಿದೆ. ಎಷ್ಟೇ ಭಾಷೆ ಕಲಿತರೂ ಹೃದಯದ ಭಾಷೆ ಮಾತೃ ಭಾಷೆಯೇ ಆಗಿರುತ್ತದೆ. ಯಾವ ಸಂಪ್ರದಾಯವೂ ಇಕ್ಕಟ್ಟಿಗೆ ಸಿಲುಕಬಾರದು ಎಂಬುದು ನಮ್ಮ ಆಶಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಕ್ಕರೆ ನಾಡು ಮಂಡ್ಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯನ್ನು ಕೊಂಡಾಡಿದರು.
ಮೂರು ದಶಕಗಳ ಹಿಂದೆ ಸಾಹಿತಿ ಚದುರಂಗ ಅವರ ಅಧ್ಯಕ್ಷತೆಯಲ್ಲಿ 63ನೇ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆದಿತ್ತು. ಆಗ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರಾಗಿದ್ದ ಡಾ. ಗೊ.ರು ಚನ್ನಬಸಪ್ಪನವರು ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ೩30 ವರ್ಷಗಳ ನಂತರ ಈಗ ನಡೆಯುತ್ತಿರುವ ೮೭ನೇ ಸಮ್ಮೇಳನದ ಅಧ್ಯಕ್ಷರೂ ಚನ್ನಬಸಪ್ಪನವರೇ ಆಗಿರುವುದು ಕನ್ನಡದ ಗೌರವವನ್ನು ಹೆಚ್ಚಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ಹಿರಿಯ ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅಧ್ಯಕ್ಷೀಯ ನುಡಿಗಳನ್ನಾಡಿ, ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು ಎಂದರಲ್ಲದೆ, ಭಾಷೆ ಎದುರಿಸುತ್ತಿರುವ ಬಿಕ್ಕಟ್ಟುಗಳು, ಅಂತರರಾಜ್ಯ ಭಾಷಾ ವಿನಿಮಯ, ತಂತ್ರಜ್ಞಾನದ ಅವಲಂಬನೆ, ಗಡಿನಾಡ ಕನ್ನಡಿಗರ ಬವಣೆ ಇತ್ಯಾದಿ 21 ಹಕ್ಕೊತ್ತಾಯಗಳ ಮೂಲಕ ಗಮನಸೆಳೆದರು.
ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರೊಂದಿಗೆ ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಸಾಹಿತಿಗಳು, ಗಣ್ಯರು ವೇದಿಕೆಯ ಮೇಲೆ ಇದ್ದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ಗೊ.ರು ಚನ್ನಬಸಪ್ಪ ಅವರ ಮೆರವಣಿಗೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರಾಷ್ಟ್ರಧ್ವಜವನ್ನು, ಕ.ಸಾ.ಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಕನ್ನಡ ಸಾಹಿತ್ಯ ಪರಿಷತ್ತು ಧ್ವಜವನ್ನು, ಪರಿಷತ್ತಿನ ಜಿಲ್ಲಾ ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ನಾಡ ಧ್ವಜಾರೋಹಣ ನೆರವೇರಿಸಿದರು.