HomeGadag Newsಯೋಜನೆಗಳು ಸಮರ್ಪಕವಾಗಿ ತಲುಪಲಿ

ಯೋಜನೆಗಳು ಸಮರ್ಪಕವಾಗಿ ತಲುಪಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಯೋಜನೆಗಳ ಅನುಷ್ಠಾನದಲ್ಲಿ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸಬೇಕು. ಜನಸಾಮಾನ್ಯರಿಗೆ ಯೋಜನೆ ಫಲಪ್ರದವಾಗಿ ತಲುಪಬೇಕು ಎಂದು ಸಂಸದ ಬಸವರಾಜ್ ಬೊಮ್ಮಾಯಿ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜರುಗಿದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿವೇಶನ ಹಂಚಿಕೆಯ ಕುರಿತಂತೆ ಕಳೆದ ಬಾರಿ ಸಭೆಯಲ್ಲಿ ತಿಳಿಸಿದಂತೆ ಈವರೆಗೆ ಎಷ್ಟು ನಿವೇಶನಗಳನ್ನು ಹಂಚಿ ಎಷ್ಟು ಉಳಿದಿವೆ ಮಾಹಿತಿ ನೀಡುವಂತೆ ಸಂಸದರು ಸೂಚಿಸಿದರು. ಇದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಶರಣಪ್ಪ ಮಾಹಿತಿ ನೀಡುತ್ತಿದ್ದಂತೆ, ಅಸಮರ್ಪಕ ಮಾಹಿತಿಯೋಂದಿಗೆ ಸಭೆ ಹಾಜರಾಗುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

ಕಳೆದ 10 ವರ್ಷದಲ್ಲಿ 4548 ಮನೆಗಳು ಅನುಮೋದನೆಯಾಗಿದ್ದು ಪೂರ್ಣವಾಗಿಲ್ಲ. ಯಾವ ತರಹ ಕೆಲಸ ನಿರ್ವಹಿಸುತ್ತೀರಿ, ಈ ವಿಳಂಬಕ್ಕೆ ಹೊಣೆ ಯಾರು ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಂಡರಗಿಯಲ್ಲಿ 385, ನರಗುಂದದಲ್ಲಿ 129 ಮನೆಗಳು ಪೂರ್ಣವಾಗಿಲ್ಲ. ಈ ಕುರಿತಂತೆ ಅಧಿಕಾರಿಗಳು, ಸಂಬಂಧಿಸಿದ ಶಾಸಕರ ಗಮನಕ್ಕೆ ತಂದು ಚರ್ಚೆ ಮಾಡಿದ್ದೀರಾ ಎಂದು ಕೇಳಿದರು. ಅಧಿಕಾರಿ ವರ್ಗ ಜನಸಾಮಾನ್ಯರಿಗೆ ಯೋಜನೆಗಳನ್ನು ಸುಲಭವಾಗಿ ತಲುಪಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಗದಗ-ಬೆಟಗೇರಿ ಅವಳಿ ನಗರದ ನೀರ ಸರಬರಾಜು ಕುರಿತಂತೆ ಪೌರಾಯುಕ್ತ ರಾಜಾರಾಮ್ ಪವಾರ್ ಅವರು ಮಾಹಿತಿ ನೀಡುತ್ತಾ, ನಗರದಲ್ಲಿ 5-6 ದಿನಕ್ಕೊಮ್ಮೆ ನೀರು ನೀಡಲಾಗುತ್ತದೆ. ಪೈಪ್‌ಲೈನ್, ವಾಲ್ ಅಳವಡಿಕೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ ಎಂದು ಸಭೆಗೆ ಮಾಹಿತಿ ಒದಗಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಂಸದ ಬಸವರಾಜ್ ಬೊಮ್ಮಾಯಿ, ಗದಗ ಜನ ಸಹನೆಯುಳ್ಳವರು. ನೀವು 15 ದಿನಕ್ಕೊಮ್ಮೆ ನೀರು ಬಿಡುತ್ತಿರುವುದು ನನ್ನ ಗಮನಕ್ಕಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರವೇ 5-6 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ ಎಂದರು.

ಬೇಸಿಗೆ ಆರಂಭವಾಗುತ್ತಿದೆ, ಜನಸಾಮಾನ್ಯರಿಗೆ ನಿಯಮಿತವಾಗಿ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಆಗಬೇಕು. ಕನಿಷ್ಠ ಮೂರು ದಿನಕ್ಕೊಮ್ಮೆ ನೀರು ಒದಗಿಸಲು ಕ್ರಮ ವಹಿಸಬೇಕೆಂದು ತಿಳಿಸಿದರು.

ಜಲಜೀವನ ಮಿಷನ್ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈಗಾಗಲೇ ಗ್ರಾಮಗಳಲ್ಲಿ ಮನೆಗಳ ಮುಂದೆ ನಳಗಳು ಇವೆ. ಆದರೆ ಅದರಲ್ಲಿ ನೀರು ಬರಲಾರದಂತಹ ಘಟನೆಗಳು ಕಂಡುಬಂದಿದ್ದು, ಜಿ.ಪಂ ಸಿಇಒ ಅವರು ಕಾಳಜಿವಹಿಸಿ ಪ್ರತಿಯೊಬ್ಬರಿಗೂ ಉತ್ತಮ ಕುಡಿಯುವ ನೀರು ಕೊಡಿಸುವ ವ್ಯವಸ್ಥೆ ಆಗಬೇಕು ಎಂದ ಹೇಳಿದು.

ಗದಗ ಜಿಲ್ಲೆ ತುಂಗಭದ್ರ ಮತ್ತು ಮಲಪ್ರಭಾ ನದಿಗಳನ್ನು ಹೊಂದಿದ್ದು, ತೋಟಗಾರಿಗೆ ಬೆಳೆಗೆ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಹಾಗಾಗಿ ತೋಟಗಾರಿಕೆ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಶ್ರಮವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಚರ್ಚಿಸಲಾಯಿತು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬೆಳ್ಳಟ್ಟಿ, ಬನ್ನಿಕೊಪ್ಪ, ಹೆಬ್ಬಾಳ ಗ್ರಾಮಗಳಲ್ಲಿ ಈ ಹಿಂದೆ ಚರ್ಚಿಸಿದಂತೆ ಗ್ರಾಮಗಳಲ್ಲಿರುವ ಪಿಎಚ್‌ಸಿಗಳಿಗೆ ವೈದ್ಯರನ್ನು ನಿಯೋಜಿಸಿ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ನಿರ್ಮಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟೆಮನೆ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ನಗರಸಭೆಯಲ್ಲಿ ನೀವು ಯಶಸ್ವಿ ಪೌರಾಯುಕ್ತರಾಗಲು ಮೊದಲು ನೀರಿನ ಪ್ರಮುಖ ಪೈಪ್‌ಲೈನ್‌ಗೆ ಇರುವ ನೇರ ಕನೆಕ್ಷನ್ ಕಟ್ ಮಾಡಬೇಕು. ವಿನಾಕಾರಣ ನೀರು ಪೋಲಾಗುವುದನ್ನು ತಡೆದರೆ, ನಿಯಮಿತವಾಗಿ ನೀರು ಸರಬರಾಜು ಮಾಡಬಹುದು. ಕೇಂದ್ರ ಸರ್ಕಾರದಿಂದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿಕರಿಗೆ ತರಬೇತಿ ನಡೆಸಲು ಆದೇಶಿಸಲಾಗಿದೆ. ತರಬೇತಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ತಿಳಿಸಿದರು.

ಅತ್ಯಂತ ಹಿಂದುಳಿದ ತಾಲೂಕಿನಲ್ಲಿರುವ ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಿದ ನಂತರವೂ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳಿಗೆ ಪರಿಣಿತರಿಂದ ಬೋಧನೆ ಕೈಗೊಳ್ಳಿ. ಬೋಧಕರಿಗೆ ತಮ್ಮ ಟ್ರಸ್ಟ್‌ ನಿಂದ ಹಣ ಒದಗಿಸಲಾಗುವುದು.

ಬಸವರಾಜ ಬೊಮ್ಮಾಯಿ.

ಗದಗ-ಹಾವೇರಿ ಸಂಸದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!