ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಭವಿಷ್ಯದ ಕನಸುಗಳಿಗೆ ಬೆಳಕಾಗುವ ತಂತ್ರಜ್ಞಾನದ ಶಿಕ್ಷಣವು ಇಂದು ಆಧುನಿಕ ಜಗತ್ತನ್ನು ಆಳುತ್ತಿದೆ. ಇದರ ಸ್ಪಷ್ಟ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಸತತಾಭ್ಯಾಸ, ಪರಿಶ್ರಮ, ಶ್ರದ್ಧೆ, ಏಕಾಗ್ರತೆ ರೂಢಿಸಿಕೊಂಡು ಉನ್ನತ ಗುರಿ ಸಾಧಿಸಬೇಕು ಎಂದು ಬೆಂಗಳೂರಿನ ಸೋನಾಟಾ ಸಾಫ್ಟ್ವೇರ್‌ನ ವೈಸ್ ಚೇರಮನ್ ಶ್ರೀಕರ ರೆಡ್ಡಿ ಹೇಳಿದರು.
ಅವರು ಮಂಗಳವಾರ ಲಕ್ಷ್ಮೇಶ್ವರದ ಶ್ರೀಮತಿ ಕಮಲಾ-ಶ್ರೀ ವೆಂಕಪ್ಪ ಎಂ.ಅಗಡಿ ಇಂಜಿನಿಯರಿಂಗ್ ಕಾಲೇಜಿನ 20ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಾಹಿತಿ-ತಂತ್ರಜ್ಞಾನ ಯುಗದಲ್ಲಿನ ನವೀನ ಸಂಪರ್ಕ ಸಾಧನ ಬಳಸಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ, ಸಂಶೋಧನೆ ಮಾಡಬೇಕು. ಯಾವುದೇ ಕಾರ್ಯವನ್ನು ಕೈಗೊಂಡಾಗಲೂ ನಾನು ಅದನ್ನು ಸಾಧಿಸಬಲ್ಲೆ ಎನ್ನುವ ದೃಷ್ಟಿಯಲ್ಲಿ ಸಾಗುವದು ಅವಶ್ಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಹರ್ಷವರ್ಧನ ಅಗಡಿ ಮಾತನಾಡಿ, ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠವಾದುದನ್ನು ಸಾಧಿಸಿಲು ಸ್ವತಂತ್ರ ಮನೋಭಾವ, ಕ್ರಿಯಾತ್ಮಕತೆ, ಏಕಾಗ್ರತೆ ರೂಢಿಸಿಕೊಳ್ಳಬೇಕು. ನಿಮ್ಮ ಭವಿಷ್ಯದ ರೂವಾರಿಗಳು ನೀವೇ ಆದ್ದರಿಂದ ಉನ್ನತ ಶಿಕ್ಷಣ, ಜ್ಞಾನ ಮತ್ತು ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ, ಹೊಸ ಅವಿಷ್ಕಾರಗಳ ಕಲ್ಪನೆ ಮತ್ತು ಇಂಗ್ಲೀಷ್ ಭಾಷೆಯ ಜ್ಞಾನ ಅಗತ್ಯವಾಗಿದ್ದು, ಪರಸ್ಪರ ಭಾಷಾ ಸಂವಹನದ ಮೂಲಕ ಭಾಷೆಯ ಜ್ಞಾನ ಹೊಂದಬೇಕು. ಕೀಳರಿಮೆ ಮರೆತು ಆತ್ಮವಿಶ್ವಾಸ, ಶಿಸ್ತು ಹೊಂದಬೇಕು ಎಂದರು.
ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಗೀತಾ ಅಗಡಿ, ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ, ಪಿಯು ಕಾಲೇಜ್ ಪ್ರಾಚಾರ್ಯ ಡಾ. ಎನ್.ಹಯವದನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಜಶೇಖರ ಮೂಲಿಮನಿ, ಟ್ರಸ್ಟಿ ಶಿಶಿರ ದೇಸಾಯಿ, ಡಾ. ದೇವೆಂದ್ರಪ್ಪ ಕೆ, ಮಾಲತೇಶ ಅಗಡಿ, ಡಾ. ಸುಜಾತಾ ಸಂಗೂರ, ವಿ.ಕೆ. ಕುಷ್ಟಗಿ, ಡಾ. ಸುಭಾಸ ಮೇಟಿ, ಡಾ. ಆರ್.ಎಂ. ಪಾಟೀಲ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಜರಿದ್ದರು. ಡಾ.ಸ್ವಪ್ನ ಚನ್ನಪ್ಪಗೌಡ್ರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರಿಯಾಂಕ, ಶ್ರೀಲಕ್ಷ್ಮಿ, ನಿಶಾ, ದಿವ್ಯಶ್ರೀ, ರಕ್ಷಿತಾ, ಪ್ರತಿಭಾ, ನಿರೂಪಿಸಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೂ ಮಾಹಿತಿ-ತಂತ್ರಜ್ಞಾನದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ವೆಂಕಪ್ಪ ಅಗಡಿ ಅವರು ಸ್ಥಾಪಿಸಿದ ಕಾಲೇಜಿನಲ್ಲಿ ವಿವಿಧ ವಿಭಾಗಗಳಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀಕರ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.