ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಅಟ್ಯಾ ಪಟ್ಯಾ ಎನ್ನುವುದು ದೇಸೀ ಕ್ರೀಡೆಯಾಗಿದೆ. ಶತಮಾನಗಳಿಂದಲೂ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿರುವ ಈ ಕ್ರೀಡೆ, ಬೆಳವಣಿಗೆ ಹೊಂದುತ್ತಾ ಬಂದಿದೆ. ಸದ್ಯ ನರೇಗಲ್ಲ ಭಾಗದಲ್ಲಿ ಈ ಕ್ರೀಡೆ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಕಾಂಗ್ರೆಸ್ ಯುವ ಮುಖಂಡ ಅಕ್ಷಯ ಐ.ಪಾಟೀಲ ಹೇಳಿದರು.
ಗದಗ ಜಿಲ್ಲಾ ಆಟ್ಯಾ ಪಟ್ಯಾ ಸಂಸ್ಥೆ, ನರೇಗಲ್ಲ ಪಟ್ಟಣದ ಚೈತನ್ಯ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸ್ಥಳೀಯ ಹೊಸ ಬಸ್ ನಿಲ್ದಾಣದ ಎದುರಿಗಿನ ಸರ್ಕಾರಿ ಶಾಲೆಯ ಆವರಣದಲ್ಲಿ 32ನೇ ರಾಜ್ಯಮಟ್ಟದ ಹೊನಲು ಬೆಳಕಿನ ಅಟ್ಯಾಪಟ್ಯಾ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮರ್ಥ್ಯ ಮತ್ತು ಯುಕ್ತಿ ಬಳಸಿ ಆಡುವ ಆಟ ಆಟ್ಯಾಪಟ್ಯಾ. ಈ ಕ್ರೀಡಾಕೂಟದಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿದ ಅನೇಕ ಕ್ರೀಡಾಪಟುಗಳು ನರೇಗಲ್ಲ ಭಾಗದಲ್ಲಿರುವುದು ಕಂಡು ಸಂತೋಷವಾಯಿತು. ಕ್ರೀಡೆಯಲ್ಲಿ ಏಕಾಗ್ರತೆ, ಸಮನ್ವಯತೆ ಇದ್ದಾಗ ಮಾತ್ರ ಜಯ ನಮ್ಮದಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ತಂಡದ ಕ್ರೀಡಾಪಟುಗಳು ಸಂಘಟನಾತ್ಮಕವಾಗಿ ಆಟವಾಡಬೇಕು, ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ವೇದಿಕೆಯ ಮೇಲೆ ಡಾ. ಎ.ಡಿ. ಸಾಮುದ್ರಿ, ನರೇಗಲ್ಲ ಶಹರ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ಗದಗ ಜಿಲ್ಲಾ ಅಟ್ಕಾ-ಪಟ್ಯಾ ಸಂಸ್ಥೆಯ ಕಾರ್ಯದರ್ಶಿ ದಡೇಸೂರಮಠ, ಮೈಲಾರಪ್ಪ ವೀ.ಚಳ್ಳಮರದ, ಅಲ್ಲಾಭಕ್ಷಿ ನದಾಫ್, ಸಂತೋಷ ಹನಮಸಾಗರ, ಸಂಜೀವ ರಡ್ಡೇರ, ಉಮೇಶ ಸಂಗನಾಳಮಠ, ಕಲ್ಮೇಶ ತೊಂಡಿಹಾಳ, ಬಸವರಾಜ ವಂಕಲಕುಂಟಿ, ಬಸವರಾಜ ಕುರಿ, ತಿಮ್ಮರೆಡ್ಡಿ ಬಂಡಿವಡ್ಡರ, ಆರ್.ಎಸ್. ನರೇಗಲ್ಲ, ಭೀಮಪ್ಪ ಪೂಜಾರ, ನಿಂಗರಾಜ ಬೇವಿನಕಟ್ಟಿ, ವಿ.ಎ. ಕುಂಬಾರ, ರಫೀಕ ರೇವಡಿಗಾರ, ಮಹಾದೇವ ಬೇವಿನಕಟ್ಟಿ ಇದ್ದರು. ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳ ೫೦೦ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖಂಡರಾದ ಮಿಥುನ ಪಾಟೀಲ, ರವೀಂದ್ರನಾಥ ದಂಡಿನ, ಶೇಕಪ್ಪ ಕೆಂಗಾರ, ಶೇಕಪ್ಪ ಜುಟ್ಟಲ, ಅಲ್ಲಾಭಕ್ಷಿ ನದಾಫ್, ಎನ್.ಕೆ. ಬೇವಿನಕಟ್ಟಿ ಮುಂತಾದವರಿದ್ದರು.
ಅಟ್ಯಾಪಟ್ಯಾ ಸಂಸ್ಥೆಯ ರಾಜ್ಯ ಪ್ರಭಾರಿ ಕಾರ್ಯದರ್ಶಿ ಎಲ್.ಸಿ. ಲಮಾಣಿ ಮಾತನಾಡಿ, ಈ ಆಟ ಖೋಖೋ ಆಟವನ್ನೇ ಹೋಲುತ್ತದೆ. ಅದೇ ಅಂಕಣ ಬಳಸಿಕೊಂಡು ಆಡಬಹುದು. ಇದಕ್ಕೆ ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಒಂದು ಸಮತಟ್ಟಾದ ಮೈದಾನ ಇದ್ದರೆ ಸಾಕು ಎಂದರು.



