ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗ ಸೆ. 22ರಿಂದ ಅ. 7ರವರೆಗೆ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಕುರಿತು ಜಾತಿಗಣತಿಗಾಗಿ ಮನೆ-ಮನೆಗೆ ಬರುವ ಗಣತಿದಾರರಿಗೆ ಮರಾಠರು ಅನುಸೂಚಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಮರಾಠಾ ಎಂದು, ಉಪಜಾತಿ ಕಾಲಂನಲ್ಲಿ ಕುಣಬಿ ಎಂದು, ಮಾತೃಭಾಷೆಯ ಕಾಲಂನಲ್ಲಿ ಮರಾಠಿ ಬರೆಸಬೇಕೆಂದು ಮರಾಠಾ ಸಮಾಜದ ರಾಷ್ಟ್ರೀಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಜರುಗಿದ ಮರಾಠಾ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. 800ರಿಂದ 900 ವರ್ಷಗಳ ಇತಿಹಾಸ ಹೊಂದಿರುವ ಮರಾಠಿಗರು ಮೂಲ ಕನ್ನಡಿಗರಾಗಿದ್ದು, ಅವರ ಮೂಲ ಕಸಬು ಕೃಷಿ (ಕುಣಬಿ) ಆಗಿದೆ. ಮರಾಠಾ ಸಮಾಜಕ್ಕೆ ಗೋಸಾಯಿಗಳು ಗುರುಗಳಾಗಿದ್ದಾರೆ. ಗೋಸಾಯಿ ಮಠವು ಈ ಹಿಂದೆ ಬೆಂಗಳೂರಿನಲ್ಲಿ 2000 ಎಕರೆ ಪ್ರದೇಶ ಹೊಂದಿತ್ತು. ಸೂಕ್ತ ನಾಯಕರು ಇಲ್ಲದೆ ಅದನ್ನು ಕಳೆದುಕೊಳ್ಳಬೇಕಾಯಿತು. ಶ್ರವಣಬೆಳಗೊಳದಲ್ಲಿ ಬಾಹುಬಲಿಯನ್ನು ಕೆತ್ತಿರುವುದು ಮರಾಠಿಗರು. ನಮಗೆ ಸಮರ್ಥರಾದ ನಾಯಕರು ಇಲ್ಲದಿರುವದರಿಂದ ನಾವು ಸಾಮಾಜಿಕವಾಗಿ ಹಿಂದೆ ಉಳಿದಿಲ್ಲ, ಆರ್ಥಿಕವಾಗಿ ಹಿಂದೆ ಉಳಿದಿದ್ದೇವೆ. ಈಗಲಾದರೂ ನಾವೆಲ್ಲರೂ ಸಂಘಟಿತರಾಗಿ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮರಾಠಾ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಅರುಣಕುಮಾರ ಚವ್ಹಾಣ, ಕಾರ್ಯದರ್ಶಿ ಸುರೇಶ ಬೇಂದ್ರೆ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ರಾಜೀವ ರೋಖಡೆ, ಸಹಕಾರ್ಯದರ್ಶಿ ಎಂ.ಆರ್. ಅರಳಿಕಟ್ಟಿ, ಪ್ರಭು ಬೇಂದ್ರೆ, ವಿನೀತಕುಮಾರ ಜಗತಾಪ, ಮಹೇಶ ಶೆಟವಾಜಿ, ಶಿವಾಜಿ ಗ್ವಾರಿ, ಮಾರುತಿ ಹೆಬ್ಬಳ್ಳಿ, ಶಿವಾಜಿ ಪವನ, ಮಂಜುನಾಥ ಮಾನೆ, ಮಲ್ಲು ದೊಡ್ಡಮನಿ, ಪರಶುರಾಮ ಜಾಧವ, ವೀರಣ್ಣ ಪವಾರ, ಶಂಕರ ಡಂಬಳ, ಸುಭಾಷ ಕದಡಿ, ನಾಗರಾಜ ಮಗದಮ್, ನಾರಾಯಣರಾವ್ ಗಾಯಕವಾಡ, ಶಂಕರ ಓಬಾಜಿ, ದೇವೇಂದ್ರ ದೊಡ್ಡಮನಿ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ಶಂಕರ ನಿಕ್ಕಮ ಸೇರಿದಂತೆ ಮರಾಠಾ ವಿದ್ಯಾವರ್ಧಕ ಸಂಘ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್, ಮಾತೋಶ್ರೀ ರಾಜಮಾತಾ ಜಿಜಾವು ಸ್ವ-ಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮರಾಠರಿದ್ದು, ಸರಕಾರದ ಹಿಂದಿನ ಸಮೀಕ್ಷೆಯಲ್ಲಿ ಕೇವಲ 16 ಲಕ್ಷ ಮರಾಠಿಗರಿದ್ದಾರೆ ಎಂದು ಗುರುತಿಸಲಾಗಿದೆ. ಇದರಿಂದ ಎಲ್ಲ ಮರಾಠಾ ಬಾಂಧವರು ಸರಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಆದ್ದರಿಂದ ಎಲ್ಲರೂ ಜಾತಿ ಗಣತಿಯಲ್ಲಿ ತಪ್ಪದೇ ಮೇಲ್ಕಂಡ ಒಮ್ಮತದ ಅಭಿಪ್ರಾಯವನ್ನು ಬರೆಸಬೇಕು. ಈಗಾಗಲೇ ಕೆಕೆಎಂಪಿ ರಾಜ್ಯಾಧ್ಯಕ್ಷ ಸುರೇಶರಾವ್ ಸಾಠೆ ಅವರು ಈ ಕುರಿತು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದು ಪಿ.ಜಿ.ಆರ್. ಸಿಂಧ್ಯಾ ಹೇಳಿದರು.