ಮಾನವೀಯ ಗುಣಗಳುಳ್ಳ ಸಮಾಜವನ್ನು ನಿರ್ಮಿಸೋಣ: ಸಂಸದ ಬಸವರಾಜ ಬೊಮ್ಮಾಯಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸನಾತನ ಹಿಂದೂ ಧರ್ಮವನ್ನು ಛಿದ್ರಗೊಳಿಸಬೇಕೆಂಬ ಪ್ರಯತ್ನ ನೂರಾರು ವರ್ಷಗಳಿಂದ ನಡೆದಿದೆ. ಆದರೆ, ಯಾವ ಶಕ್ತಿಗಳು ಈ ಧರ್ಮವನ್ನು ಮುಟ್ಟಲು ಬಂದಿವೆಯೋ, ಆ ಎಲ್ಲ ಶಕ್ತಿಗಳು ನಾಮಾವಶೇಷವಾಗಿ ಹೋಗಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ಅತಿರುದ್ರ ಮಹಾಯಾಗ ಸೇವಾ ಸಮಿತಿ ಏರ್ಪಡಿಸಿದ್ದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ದೈವ ಶಕ್ತಿಯ ಜೊತೆಗೆ ಸುರ ಮತ್ತು ಅಸುರರ ಶಕ್ತಿ ಇತ್ತು. ಸುರ-ಅಸುರರ ನಡುವೆ ಯಾವಾಗಲೂ ಸಂಘರ್ಷ ಆಗುತ್ತದೆ. ಆದರೆ, ಯಜ್ಞ-ಯಾಗಾದಿಗಳ ಮೂಲಕ ಗುರುಗಳು ಸತ್ಯಕ್ಕೆ, ನ್ಯಾಯಕ್ಕೆ, ಧರ್ಮಕ್ಕೆ ಜಯವನ್ನು ತಂದು ಕೊಟ್ಟಿದ್ದಾರೆ. ಅದು ಗುರುವಿನ ಶಕ್ತಿ. ಸುರ-ಅಸುರರ ಶಕ್ತಿಯನ್ನು ನಿಗ್ರಹಿಸಿರುವುದು ಮಹಾಶಿವ. ಮಹಾದೇವ ವಿಷಕಂಠನಾಗಿ ಸುರ-ಅಸುರರ ನಡುವೆ ನಡೆದ ಯುದ್ಧದಲ್ಲಿ ಹಾಲಾಹಲವನ್ನು ನುಂಗಿ ಇಡೀ ಜಗತ್ತಿಗೆ ಕಲ್ಯಾಣ ಮಾಡಿದ ಮಹಾದೇವನ ಹೆಸರಿನಲ್ಲಿ ಇಂದು ಯಜ್ಞ-ಯಾಗಾದಿಗಳು ನಡೆಯುತ್ತಿವೆ ಎಂದರು.

ಪರಮಪೂಜ್ಯ ಸಹದೇವಾನಂದ ಜೀ ಅವರು 12 ಲಕ್ಷ ಸಾಧುಗಳ ಅಖಾಡದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ತಪಸ್ಸನ್ನು ಸದಾಕಾಲ ಈ ಭೂಮಿಯ ಮೇಲೆ ಬಿಟ್ಟು ಹೋಗುತ್ತಿದ್ದಾರೆ. ಇದೆಲ್ಲ ನಮ್ಮ ಪುಣ್ಯ ಭಾಗ್ಯವಾಗಿದೆ. ಗದುಗಿನ ಜನರು ಬಹಳ ಪುಣ್ಯ ಮಾಡಿದ್ದೀರಿ, ಬರುವ ದಿನಗಳಲ್ಲಿ ಉತ್ತಮವಾಗಿರುವ, ಮಾನವೀಯ ಗುಣಗಳಿರುವ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.

ಶ್ರೀ ಪಂಚದಶನ ಜುನಾ ಆಖಾಡ ಪೀಠಾಧೀಶ್ವರ ಶ್ರೀ ಸಹದೇವಾನಂದ ಗಿರಿಜಿ ಮಹಾರಾಜರು ನೇತೃತ್ವ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಹಿರೇಮಠ ಶಿವಾಚಾರ್ಯರು, ಸೇವಾ ಸಮಿತಿ ಅಧ್ಯಕ್ಷ ಕಿರಣ್ ಬೂಮಾ, ಎಚ್.ಎಸ್. ಶಿವನಗೌಡ್ರ, ರವಿ ದಂಡಿನ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕಾಂಗ್ರೆಸ್ ಮುಖಂಡ ಬಿ.ಬಿ. ಅಸೂಟಿ, ಉಮೇಶಗೌಡ ಪಾಟೀಲ, ವಿಜಯಲಕ್ಷ್ಮಿ ಮಾನ್ವಿ, ವೆಂಕಟೇಶ ಕುಲಕರ್ಣಿ, ವಿನೋದ ಶಿದ್ಲಿಂಗ್ ಸೇರಿದಂತೆ ಹಿಮಾಲಯದಿಂದ ಆಗಮಿಸಿದ್ದ ಸಾಧು-ಸಂತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅತಿರುದ್ರ ಮಹಾಯಾಗ ಸೇವಾ ಸಮಿತಿ ಗೌರವಾಧ್ಯಕ್ಷ, ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಭಾಗಿಯಾಗಿಲ್ಲ ಎನ್ನುವ ನೋವು ನನಗಿತ್ತು. ಆದರೆ ಈ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳದಲ್ಲಿ ಭಾಗವಹಿಸಿರುವುದು ಆ ನೋವು ಮರೆಸಿದೆ. ಕಿರಣ್ ಬೂಮಾ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಆರಂಭವಾಗಿದೆ. 11 ಸಾವಿರ ಮಹಿಳೆಯರ ಕುಂಭಮೇಳ ಗದಗ ಪರಿಸರವನ್ನು ಪವಿತ್ರಗೊಳಿಸಿದೆ ಎಂದರು.

 


Spread the love

LEAVE A REPLY

Please enter your comment!
Please enter your name here