ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯರನ್ನು ದೇವರ ಸಮಾನವಾಗಿ ನೋಡಿಕೊಂಡರೆ ಪುಣ್ಯ ಪ್ರಾಪ್ತಿಯಾಗುತ್ತದೆ. ವಯೋವೃದ್ಧರಿಗೆ, ಅಂಗವಿಕಲರಿಗೆ ಸಹಾಯ ಮಾಡಿ ಸಶಕ್ತ ಭಾರತವನ್ನು ನಿರ್ಮಿಸೋಣ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಅಗತ್ಯವಾದ ನೆರವಿನ ಸಾಧನ ಹಾಗೂ ಸಹಾಯಕ ಉಪಕರಣ ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹುಟ್ಟು-ಸಾವು ಆಕಸ್ಮಿಕವಾಗಿದೆ. ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಬದುಕಿನಲ್ಲಿ ಅರ್ಥಪೂರ್ಣವಾಗಿ ಜೀವನ ಸಾಗಿಸಬೇಕು. ಬಡತನವಿರಲಿ, ಸಿರಿತನವಿರಲಿ ಪ್ರತಿಯೊಬ್ಬ ಮನುಷ್ಯನ ಬದುಕು ಸಾರ್ಥಕತೆಯಿಂದ ಕೂಡಿರಬೇಕು. ಇದರಿಂದ ಮನುಷ್ಯ ಶ್ರೇಷ್ಠನಾಗುತ್ತಾನೆ. ಮನುಷ್ಯ ಹುಟ್ಟಿದಾಗ ತಂದೆ-ತಾಯಿ, ಬಂಧು-ಬಳಗದ ಆಶ್ರಯವಿಲ್ಲದೇ ಬೆಳೆಯಲು ಸಾಧ್ಯವಿಲ್ಲ. ಎಲ್ಲ ಸಂಬಂಧಗಳಿಗಿಂತ ತಾಯಿಯ ಸಂಬಂಧ ಶ್ರೇಷ್ಠವಾದದ್ದು. ತಾಯಿ ಗರ್ಭದಿಂದ ಭೂತಾಯಿಯ ಗರ್ಭದವರೆಗೆ ನಮ್ಮ ಸಂಬಂಧ ಇರುತ್ತದೆ. ಇದರ ನಡುವೆ ಒಬ್ಬರನ್ನೊಬ್ಬರನ್ನು ಪ್ರೀತಿಸುವ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪ್ರತಿಯೊಂದು ತಾಲೂಕು ಆಸ್ಪತ್ರೆಯಲ್ಲಿ 60 ವರ್ಷ ಮೆಲ್ಪಟ್ಟವರನ್ನು ಗುರುತಿಸಿ 663 ಸಲಕರಣೆಗಳನ್ನು ವಿತರಿಸಲಾಗುತ್ತಿದೆ. 60 ವರ್ಷ ಆದ ನಂತರ ವಯೋಸಹಜ ಕಾಯಿಲೆಗಳು ಬರುತ್ತವೆ. ಹೀಗಾಗಿ, ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಬೇಕು. ಹಿರಿಯರು ನಡೆಯುವಾಗ ಎಚ್ಚರಿಕೆ ವಹಿಸಬೇಕು. ಸಲಕರಣೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, 660ಕ್ಕೂ ಹೆಚ್ಚು ಫಲಾನುಭವಿಗಳಿಗೆ 64 ಲಕ್ಷ ರೂ ವೆಚ್ಚದಲ್ಲಿ ಕೇಂದ್ರ ಸರ್ಕಾರ ಸಲಕರಣೆ ನೀಡುತ್ತಿರುವುದು ಸಂತಸದ ವಿಷಯ. ಗದಗ ಜಿಲ್ಲೆಯಲ್ಲಿನ ಯಾವುದೇ ಫಲಾನುಭವಿಗಳು ಸರ್ಕಾರದ ಸೌಲಭ್ಯದಿಂದ ವಂಚಿತವಾಗಬಾರದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್ ಮಾತನಾಡಿ, ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಫಲಾನುಭವಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ರಾಷ್ಟ್ರೀಯ ಇಂದಿರಾ ಗಾಂಧಿ ಯೋಜನೆ, ರಾಷ್ಟ್ರೀಯ ಭದ್ರತಾ ಯೋಜನೆ ಸೇರಿದಂತೆ ಅಂಗವಿಕಲರಿಗೆ, ವಯೋವೃದ್ಧರಿಗೆ ಅನೇಕ ಯೋಜನೆಗಳು ಇದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಜಿಲ್ಲಾಡಳಿತದ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಕ್ಬರಸಾಬ ಬಬರ್ಚಿ, ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ. ಮಹಾಂತೇಶ ಮುಂತಾದವರು ಇದ್ದರು.
ಸರ್ಕಾರ ಹಿರಿಯರ ಊರುಗೋಲಾಗಿ ನಿಂತಿದೆ. ನಾನು ಸಿಎಂ ಆಗಿದ್ದಾಗ ಹಿರಿಯ ನಾಗರಿಕರ ಸಂಧ್ಯಾ ಸುರಕ್ಷಾ, ಅಂಗವಿಕಲರ ಪೆನ್ಷನ್ ಹಣದಲ್ಲಿ ಹೆಚ್ಚಳ ಮಾಡಿದ್ದೆ. ಕ್ಯಾನ್ಸರ್‌ನ ಕಿಮೋಥೆರಪಿ, ಕಿಡ್ನಿ ಡಯಾಲಿಸಿಸ್ ಚಿಕಿತ್ಸೆಯ ನೆರವನ್ನು ಹೆಚ್ಚಳ ಮಾಡಿದ ತೃಪ್ತಿಯಿದೆ. ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ್ದೇನೆ, ಸುಡುಗಾಡಿನಲ್ಲಿ ಕೆಲಸ ಮಾಡುವವರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದ್ದೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.