ವಿಜಯಸಾಕ್ಷಿ ಸುದ್ದಿ, ಲಕ್ಷೇಮಶ್ವರ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಲೂಕಿನ ಆಡಳಿತದ ಮೂಲಕ ಅರ್ಥಪೂರ್ಣ ಮತ್ತು ವ್ಯವಸ್ಥಿತವಾಗಿ ಆಚರಿಸೋಣ ಎಂದು ತಾ.ಪಂ ಇಓ ಕೃಷ್ಣಪ್ಪ ಧರ್ಮರ ಹಾಗೂ ಗ್ರೇಡ್‐2 ತಹಸೀಲ್ದಾರ ಮಂಜುನಾಥ ಅಮಾಸಿ ಹೇಳಿದರು.
ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳೊಡಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನವೆಂಬರ್ 1ರಂದು ತಾಲೂಕಿನ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಮುಂಜಾನೆ 8.30 ರೊಳಗಾಗಿ ಭುವನೇಶ್ವರಿತಾಯಿಯ ಭಾವಚಿತ್ರದ ಪೂಜೆಯನ್ನು ಪೂರೈಸಿ, ನಂತರ 9 ಗಂಟೆಗೆ ಪುರಸಭೆ ಉಮಾ ವಿದ್ಯಾಲಯ ಮೈದಾನದಲ್ಲಿ ತಾಲೂಕಾಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ನಂತರ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಕನ್ನಡಪರ ಸಂಘಟನೆಗಳು, ಹಾಗೂ ಶಿಕ್ಷಕರು ಪಾಲ್ಗೊಂಡು ಅಚ್ಚುಕಟ್ಟಾಗಿ ನಿರ್ವಹಿಸಲು ಸಹಕರಿಸಬೇಕು.
ವೇದಿಕೆ ವ್ಯವಸ್ಥೆ, ನಾಡಗೀತಿ, ರೈತಗೀತೆ ಕಾರ್ಯಕ್ರಮಗಳನ್ನು ನಿರ್ವಹಿಸಲು ಪ್ರತ್ಯೇಕವಾದ ತಂಡಗಳು ವಿಶೇಷ ಆಸಕ್ತಿಯಿಂದ ಭಾಗವಹಿಸಬೇಕು. ಎಲ್ಲರೂ ಸೇರಿ ನಾಡ ಹಬ್ಬವನ್ನು ಸಂಭ್ರಮದಿಲ್ಲಿ, ವ್ಯವಸ್ಥಿತವಾಗಿ ಆಚರಿಸೋಣ, ಯಾವುದೇ ಇಲಾಖೆಯವರು, ಗೈರು-ಹಾಜರಾಗುವಂತಿಲ್ಲ ಎಂದು ಹೇಳಿದರು.
ಈ ಸಮಯದಲ್ಲಿ ಹಾಜರಿದ್ದ ಕನ್ನಡಪರ ಸಂಘಟನೆಗಳ ಮುಖಂಡರಾದ ಲೋಕೇಶ್ ಸುತಾರ, ಮಂಜುನಾಥ ಗಾಂಜಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಲನಚಿತ್ರಗೀತೆಗಳಿಗೆ ನೃತ್ಯ ಸಂಯೋಜನೆ ಬೇಡ, ಕನ್ನಡ ನೆಲ, ಜಲ, ಭಾಷೆ ಸಂಸ್ಕೃತಿ ಬಿಂಬಿಸುವ ನೃತ್ಯಗಳು ಇರಲಿ. ವೇದಿಕೆ ಕನ್ನಡತನವನ್ನು ಬಿಂಬಿಸುವತಿರಲಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶಿರಸ್ತೇದಾರ ಜಮೀರ ಮನಿಯಾರ, ಅಧೀಕ್ಷಕಿ ರೇಣುಕಾ ಶಿರಹಟ್ಟಿ, ಶಂಬುಲಿಗಪ್ಪ ನೆಗಳೂರ, ಸಿಆರ್‌ಪಿ ಸತೀಶ ಬೋಮಲೆ, ಕಂದಾಯ ಅಧಿಕಾರಿಯು ಎಂ.ಎ. ನಧಾಪ್, ಕಾರ್ಮಿಕ ಇಲಾಖೆಯ ರಾಣಿ ಪಾಟೀಲ, ಅರಣ್ಯ ಇಲಾಖೆಯ ಮಂಜುನಾಥ ಚವ್ಹಾಣ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಚಂದ್ರು ಹಂಪಣ್ಣವರ, ಮಂಜುನಾಥ ಗಾಂಜಿ, ಇಲಿಯಾಸ್ ಮೀರಾನವರ, ಸಾಹೇಬಲಾಲ್ ಕಲೆಗಾರ, ಶ್ರೇಯಾಂಕ ಹಿರೇಮಠ, ಪ್ರವೀಣ ಗಾಣಿಗೇರ, ಎಎಸ್‌ಐ ಮಟ್ಟಿ ಮುಂತಾದವರು ಹಾಜರಿದ್ದು ಸಲಹೆ-ಸೂಚನೆ ನೀಡಿದರು.
ಕಸಾಪ ತಾಲೂಕಾಧ್ಯಕ್ಷ, ಶಿಕ್ಷಕ ಈಶ್ವರ ಮೇಡ್ಲೇರಿ ಮಾತನಾಡಿ, ಕನ್ನಡ ನಾಡಗೀತೆ ಜಾರಿಗೆ ಬಂದು ನೂರು ವರ್ಷವಾಗಿರುವ ಈ ಸಂದರ್ಭದಲ್ಲಿ ತಾಲ್ಲೂಕಿನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗುಂಪು ನಾಡಗೀತೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ನಾಡಗೀತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸುವ ಗುಂಪಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನವೆಂಬರ್ 1ರಂದು ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವದು. ಎಲ್ಲ ಸಂಘಟನೆಗಳ ಸಹಯೋಗದೊಂದಿಗೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡೋಣ ಎಂದರು.


