ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಸಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಸಂಸ್ಕಾರಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ನಮ್ಮ ದೇಶಕ್ಕೆ ಆಧ್ಯಾತ್ಮವೇ ದೊಡ್ಡ ಶಕ್ತಿಯಾಗಿದೆ. ಸಮಾಜದ ಹಾಗೂ ಸರ್ವರ ಏಳಿಗೆಗೆ ಆಧ್ಯಾತ್ಮವೇ ಸುಲಭ ಮಾರ್ಗ ತೋರಿಸುತ್ತದೆ ಎಂದು ಜೈನ ಸಮಾಜದ ಗುರುಗಳಾದ ವಿಮಲ ಸಾಗರ ಸೂರಿಜಿ ಮಾರಾಸಾಹೇಬ ಹೇಳಿದರು.
ಅವರು ಲೋಕ ಕಲ್ಯಾಣಾರ್ಥವಾಗಿ ಗದಗಿನಲ್ಲಿ ಚತುರ್ಮಾಸದ ನಿಮಿತ್ತ ಜರುಗಿದ 4 ತಿಂಗಳ ಧರ್ಮ ಕಾರ್ಯಕ್ರಮ ಮುಗಿಸಿ ಮೊದಲ ಬಾರಿಗೆ ಮಂಗಳವಾರ ಶಿರಹಟ್ಟಿ ಪಟ್ಟಣಕ್ಕೆ ಪ್ರವೇಶ ಮಾಡುತ್ತಿದ್ದಂತೆ ಜೈನ್ ಸಮಾಜ ಬಾಂಧವರು ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು. ನಂತರ ಪಟ್ಟಣದಲ್ಲಿ ಸಂಚರಿಸುತ್ತಲೇ ಪಾರ್ಶ್ವನಾಥ ಜೈನ ಮಂದಿರಕ್ಕೆ ತೆರಳಿ ಅಲ್ಲಿ ಧರ್ಮದ ಕುರಿತು ಪ್ರವಚನ ನೀಡಿ ಮಾತನಾಡಿದರು.
ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಉಳಿಸುವುದರೊಂದಿಗೆ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಲು ಸಾಧ್ಯ. ಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಅರಿವು, ಧಾರ್ಮಿಕ ಭಾವನೆ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಧರ್ಮ ಬೋಧನೆಯ ತತ್ವಗಳನ್ನು ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ನಮ್ಮ ದೇಶ ಧರ್ಮದ ತಳಹದಿಯ ಮತ್ತು ಉತ್ತಮ ಸಂಸ್ಕಾರದ ದೇಶವಾಗಿದೆ. ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಹೊಂದುವುದು ಅವಶ್ಯಕವಾಗಿದೆ. ತಮ್ಮ ಮಕ್ಕಳಿಗೆ ಎಷ್ಟೇ ಶಿಕ್ಷಣ ಕೊಡಿಸಿದರೂ ಮೊದಲು ಉತ್ತಮ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ. ಮಾನವನ ಬಹುದೊಡ್ಡ ನಿಧಿ ಆಧ್ಯಾತ್ಮ. ಮಾನವನ ಆಧ್ಯಾತ್ಮ ಜೀವನದಿಂದ ಮಾತ್ರ ಉನ್ನತ ಶ್ರೇಯಸ್ಸು, ಶಾಂತಿ, ನೆಮ್ಮದಿ ಹಾಗೂ ಜೀವನ ಮೌಲ್ಯವನ್ನು ಆನಂದಿಸಬಹುದು ಎಂದರು.
ಜೈನ್ ಸಮಾಜದ ಮುಖಂಡರಾದ ಭವರಲಾಲ್ ಮಣೋತ್, ಬುರಚಂದ್ ಜೈನ್, ಉಮೇದಮಲ್ ಜೈನ್, ಗೌತಮ ಜೈನ್, ಪ್ರವೀಣ ಜೈನ್, ದಿಲಿಪ್ ಮಣೋತ್, ಮಧು ಜೈನ್, ಸವಿತಾ ಜೈನ್, ತ್ರಿಶಲ್ ಜೈನ್, ನಿರ್ಮಲಾ ಜೈನ್, ಸಂಗೀತಾ ಜೈನ್, ದೀರಜ್ ಜೈನ್, ಮೇವುಲ್ ಜೈನ್, ಪ್ರಕ್ಷಾಲ್ ಜೈನ್ ಇತರರು ಇದ್ದರು.
ಭಾರತ ಆಧ್ಯಾತ್ಮದ ಸ್ವರ್ಗ ಮತ್ತು ಪುಣ್ಯ ಭೂಮಿ. ಭಾರತವನ್ನು ಇಡೀ ಜಗತ್ತು ಪವಿತ್ರ ನಾಡು ಎಂದು ಕರೆದಿದೆ. ಭಾರತೀಯರು ಎಲ್ಲ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡುತ್ತಿರುವುದಕ್ಕೆ ಆಧ್ಯಾತ್ಮಿಕ ಶಕ್ತಿಯ ರಹಸ್ಯವೇ ಕಾರಣವಾಗಿದೆ. ಪ್ರತಿಯೊಬ್ಬರೂ ಕೂಡ ಮುಂಜಾನೆ ದೇವರ ಸ್ಮರಣೆ ಮಾಡುವ ಮೂಲಕ ತಮ್ಮ ದಿನಚರಿಯನ್ನು ಆರಂಭಿಸಬೇಕು. ಆಗ ಮಾತ್ರ ಎಲ್ಲರಿಗೂ ಒಳಿತಾಗಲಿದೆ. ಕಾಣದ ಶಕ್ತಿ ಒಂದು ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆಯಿಂದ ದೇವರ ಪೂಜೆ ಮಾಡುತ್ತೇವೆ. ಪ್ರತಿಯೊಬ್ಬರೂ ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಅನುಸಾರವಾಗಿ ಹುಟ್ಟಿಕೊಂಡಿರುವ ಎಲ್ಲ ಜಾತಿಗಳು ಧರ್ಮ ಬೋಧನೆ ನಡೆಸುತ್ತಿವೆ ಎಂದು ವಿಮಲ ಸಾಗರ ಸೂರಿಜಿ ಮಾರಾಸಾಹೇಬ ತಿಳಿಸಿದರು.



