ಕಾಯ ಕಣ್ಮರೆಯಾದರೂ ನೆನಹು ಶಾಶ್ವತ : ರಂಭಾಪುರಿ ಶ್ರೀಗಳು

0
Lim. Centenary Ceremony of Shivlinga Shri for Gender Harmony
Spread the love

ವಿಜಯಸಾಕ್ಷಿ ಸುದ್ದಿ, ಮುಧೋಳ : ಸೇರುವುದು ಆಕಸ್ಮಿಕ. ಅಗಲುವುದು ಅನಿವಾರ್ಯ. ಸವಿನೆನಪೊಂದೇ ಶಾಶ್ವತ. ಭೌತಿಕ ಕಾಯ ಕಣ್ಮರೆಯಾದರೂ ಅವರು ಮಾಡಿದ ಸತ್ಕಾರ್ಯಗಳು ಜನಮನದಲ್ಲಿ ಸದಾ ಹಸಿರು. ಲಿಂ. ಶಿವಲಿಂಗ ಶ್ರೀಗಳವರು ಮಾಡಿದ ಧರ್ಮ ಕಾರ್ಯಗಳು ಭಕ್ತರ ಮನದಂಗಳದಲ್ಲಿ ಸದಾ ಹಸಿರಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮುಧೋಳ(ಬಿ) ಗ್ರಾಮದ ಶ್ರೀ ಚರಮೂರ್ತಿ ಮಠದ ಲಿಂ. ಶಿವಲಿಂಗ ಶ್ರೀಗಳವರ ಲಿಂಗಾಂಗ ಸಾಮರಸ್ಯದ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಹು ಜನ್ಮದ ಪುಣ್ಯ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವು ಆದರ್ಶ ಮತ್ತು ಆಚರಣೆಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಹುಟ್ಟು ಸಾವುಗಳ ಮಧ್ಯದ ಬಾಳ ಬದುಕಿನ ಜವಾಬ್ದಾರಿ ಅವರವರದೇ ಆಗಿದೆ ಹೊರತು ಬೇರಾರಿಗೂ ಸಂಬಂಧವಿರುವುದಿಲ್ಲ. ಜೀವನ ತೆರೆದಿಟ್ಟ ಪುಸ್ತಕ. ಆ ಪುಸ್ತಕದ ಮೊದಲ ಪುಟದಲ್ಲಿ ಹುಟ್ಟು ಕೊನೆಯ ಪುಟದಲ್ಲಿ ಮೃತ್ಯು ಬರೆದಿಟ್ಟಿದ್ದಾನೆ. ಈ ಹುಟ್ಟು ಸಾವುಗಳ ಬಂಧನದಿಂದ ಮುಕ್ತಗೊಳಿಸುವುದೇ ವೀರಶೈವ ಧರ್ಮದ ಪರಮ ಗುರಿಯಾಗಿದೆ ಎಂದರು.
ಲಿಂಗಾಂಗ ಸಾಮರಸ್ಯ ಶತಮಾನೋತ್ಸವ ಸಮಾರಂಭದ ನೇತೃತ್ವ ವಹಿಸಿದ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಚರಮೂರ್ತಿ ಮಠದ ಇತಿಹಾಸದಲ್ಲಿ ಇಂದಿನ ದಿನ ಅವಿಸ್ಮರಣೀಯ ದಿನ. ನಮ್ಮ ಪೂರ್ವಜರ ಬಹು ದಿನಗಳ ಕನಸು ನನಸಾದ ಸುದಿನ. ಲಿಂ. ಶಿವಲಿಂಗ ಶಿವಾಚಾರ್ಯರು ಲಿಂಗೈಕ್ಯರಾಗಿ ನೂರು ವರುಷ ಪೂರ್ಣಗೊಂಡ ಸಂದರ್ಭದಲ್ಲಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿರುವುದು ಭಕ್ತ ಸಂಕುಲಕ್ಕೆ ಸಂತೋಷ ತಂದಿದೆ. ಶ್ರೀ ರಂಭಾಪುರಿ ಪೀಠದ ಶಾಖಾ ಚರಮೂರ್ತಿಮಠ ಇದಾಗಿರುವುದರಿಂದ ಶ್ರೀ ರಂಭಾಪುರಿ ಜಗದ್ಗುರುಗಳವರ ಕೃಪಾಶೀರ್ವಾದ ನಮ್ಮೆಲ್ಲರ ಮೇಲಿರಲೆಂದು ಭಿನ್ನವಿಸಿದರು.
  ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮತ್ತು ಯಂಕಂಚಿಮಠದ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಹೆಡಗಾಪುರದ ಶಿವಲಿಂಗ ಶ್ರೀಗಳು, ಹಣೆಗಾಂವ ಶಂಕರಲಿಂಗ ಶ್ರೀಗಳು, ಹೆಡಗಾಪುರ ದಾರುಕಲಿಂಗ ಶ್ರೀಗಳು, ದೇವಣಿ ಸಿದ್ಧಲಿಂಗ ಶ್ರೀಗಳು, ಕೌಳಾಸ ಬಸವಲಿಂಗ ಶ್ರೀಗಳು ಉಪಸ್ಥಿತರಿದ್ದರು. ಔರಾದ್ ರವಿಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
  ಶ್ರೀ ಶಿವಲಿಂಗೇಶ್ವರ ಮಹಿಳಾ ರುದ್ರ ಸಂಘದ ಸದಸ್ಯರಿಂದ ವೇದಘೋಷ, ವೀರಭದ್ರಯ್ಯ ಕಟ್ಟಿಸಂಗಾವಿ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಜೇರಟಗಿ ಮಡಿವಾಳೇಶ್ವರ ಶಾಸ್ತಿçಗಳು ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಅಲಂಕೃತ ಸಾರೋಟದ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಂಡರು. ಭಜನಾ ಸಂಘ, ವೀರಗಾಸೆ, ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಡೊಳ್ಳು ಕಲಾವಿದರು ಮೆರವಣಿಗೆಗೆ ಮೆರಗು ತಂದರು.
ಸಮಾರಂಭ ಉದ್ಘಾಟಿಸಿದ ಬೀದರ ಸಂಸದ ಸಾಗರ ಖಂಡ್ರೆ ಮಾತನಾಡಿ, ಉಜ್ವಲ ಭವಿಷ್ಯಕ್ಕೆ ಧರ್ಮವೇ ದಿಕ್ಸೂಚಿ. ಮಾನವೀಯ ಮೌಲ್ಯಗಳನ್ನು ಅರಿತು ಬೆರೆತು ನಡೆದಾಗ ಬದುಕು ಸಾರ್ಥಕ. ಲಿಂ. ಶಿವಲಿಂಗ ಶ್ರೀಗಳವರ ಲಿಂಗಾಂಗ ಸಾಮರಸ್ಯ ಸಮಾರಂಭದ ಉದ್ಘಾಟನೆ ಮಾಡಿರುವುದು ಪೂರ್ವ ಜನ್ಮದ ಸುಕೃತವೆಂದರು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ, ಕಾರುಣ್ಯ ಕುಸುಮ ಕೃತಿ ಬಿಡುಗಡೆಗೊಂಡವು.

Spread the love
Advertisement

LEAVE A REPLY

Please enter your comment!
Please enter your name here