ವಿಜಯಸಾಕ್ಷಿ ಸುದ್ದಿ, ಡಂಬಳ : ಲಿಂ. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡ ನಾಡಿನ ಭಾಷೆ, ನೆಲ, ಜಲ, ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ಕೆ ಸದಾ ಕಾಲ ಮುಂದಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಭಕ್ತರನ್ನು ತಮ್ಮ ಹರಿತವಾದ ಮಾತಿನ ಮೂಲಕ ಎಚ್ಚರಿಸುತ್ತಿದ್ದರು ಎಂದು ಡಾ.ಜಗದ್ಗುರು ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಡಂಬಳ ಗ್ರಾಮದ ಜಮಾಲಶಾವಲಿ ಶರಣರ ದರಗಾದ ಆವರಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಮತ್ತು ದರಗಾ ಸಮಿತಿಯು ಹಮ್ಮಿಕೊಂಡಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ 6ನೇ ವರ್ಷದ ಪುಣ್ಯಸ್ಮರಣೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.
ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಎಲ್ಲಾ ಧರ್ಮದವರ ಮೇಲೆ ಮಮತೆ ಹೊಂದಿದ್ದರು. ವಿಶೇಷವಾಗಿ, ಜಾತ್ರಾ ಮಹೋತ್ಸವದಲ್ಲಿ ಜಾತಿ-ಮತ-ಪಂಥ ತೊಡೆದು ಹಾಕಲು ದೂರದೃಷ್ಟಿಕೋನದ ರೊಟ್ಟಿ ಜಾತ್ರಾಮಹೋತ್ಸವ ಆಚರಿಸುವುದರ ಮೂಲಕ ಸಾಮಾಜಿಕ ಜಾಢ್ಯಗಳನ್ನು ಹೊಡೆದೋಡಿಸಿ ಬಸವಣ್ಣನವರ ತತ್ವಗಳನ್ನು ಸಾರಿದ್ದಾರೆ. ಪರಮ ಪೂಜ್ಯ ಗುರುಗಳ ಕಾರ್ಯ ಸದಾ ಸ್ಮರಣೀಯವಾದದ್ದು. ಮುಸ್ಲಿಂ ಸಮಾಜದವರು ಪ್ರತಿ ವರ್ಷವು ಅವರ ಪುಣ್ಯಸ್ಮರಣೋತ್ಸವ ಆಚರಿಸುವುದರ ಮೂಲಕ ಅವರ ವಿಚಾರ ಕಾರ್ಯಗಳಿಗೆ ಅರ್ಥ ನೀಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭೈರನಹಟ್ಟಿ ಮತ್ತು ಶಿರೋಳದ ಶಾಂತಲಿಂಗ ಮಹಾಸ್ವಾಮಿಗಳು, ಮುಸ್ಲಿಂ ಸಮಾಜದ ಧರ್ಮಗುರುಗಳಾದ ಖಾದರಸಾಬ ಮುಲ್ಲಾ, ಅಂಜುಮನ್ ಸಮಿತಿಯ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಮಾಜಿ ಸಚಿವ ಎಸ್.ಎಸ್. ಪಾಟೀಲ್, ವಿ.ಎಸ್. ಯರಾಶಿ, ಶಪೀಕ ಮೂಲಿಮನಿ, ಬಸುರಡ್ಡಿ ಬಂಡಿಹಾಳ, ಭೀಮಪ್ಪ ಗದಗಿನ, ಖಾಜಾಹುಸೇನ ಹೊಸಪೇಟೆ, ಮಹೇಶ ಗಡಗಿ, ಶರಣು ಬಂಡಿಹಾಳ, ಚಂದ್ರು ಯಳ್ಳಮಲ್ಲಿ, ಜಾಕೀರ ಮೂಲಿಮನಿ, ಮುರ್ತುಜಾ ಮನಿಯಾರ, ಬುಡ್ನೆಸಾಬ ಅತ್ತಾರ, ಬಾಬುಸಾಬ ಮೂಲಿಮನಿ, ಡಿ.ಡಿ. ಸೊರಟೂರ, ಜಂದಿಸಾಬ ಸರಕಾವಾಸ, ಬಾಬುಸಾಬ ಸರಕಾವಾಸ, ಗೌಸುಸಾಬ ಆಲೂರ, ಅಲ್ಲಾವುದ್ದೀನ ಹೊಂಬಳ, ಹುಸೇನಸಾಬ ದೊಡ್ಡಮನಿ, ಸದ್ದಾಂ ರಜಕ್ಕನವರ ಸೇರಿದಂತೆ ಸಮಾಜದ ಹಿರಿಯರು ಇದ್ದರು.