ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆಯಾದ ಸಂಚು ಪ್ರಕರಣದಲ್ಲಿ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. 2008ರ ಮಾದರಿಯಲ್ಲಿ ಸ್ಫೋಟ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರ್ಟಿ ನಗರದಲ್ಲಿನ ಮನೆಯಲ್ಲಿ ಜೀವಂತ ಗ್ರೆನೇಡ್, ಪಿಸ್ತೂಲ್ ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವನ್ನು 2023ರಲ್ಲಿ ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದರು.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ದಾಳಿ ನಡೆಸಿ ಸ್ಫೋಟಕ ವಸ್ತುಗಳು, ವಾಕಿ-ಟಾಕಿ ಹಾಗೂ ನಕ್ಷೆಗಳನ್ನು ವಶಪಡಿಸಿಕೊಂಡಿತ್ತು. ಬಳಿಕ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡು ಮುಂದಿನ ತನಿಖೆ ನಡೆಸಿತು.
ತನಿಖೆಯಲ್ಲಿ ಬೆಂಗಳೂರು ಸ್ಫೋಟದ ರೂವಾರಿಯಾದ ಟಿ. ನಾಜೀರ್ ಜೊತೆ ಆರೋಪಿಗಳಿಗೆ ಸಂಪರ್ಕವಿದ್ದದ್ದು ಬಹಿರಂಗವಾಯಿತು. ಜೈಲಿನಲ್ಲಿದ್ದಾಗಲೇ ನಾಜೀರ್ನಿಂದ ಉಗ್ರ ಚಟುವಟಿಕೆಗಳಿಗೆ ಪ್ರೇರಣೆ ಪಡೆದಿದ್ದರು ಎಂಬುದು ತಿಳಿದುಬಂದಿದೆ. ಜೈಲಿನಿಂದ ಬಿಡುಗಡೆಯಾದ ನಂತರ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ.
2023ರಲ್ಲಿ ಸಂಚು ರೂಪಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಎ1 ಟಿ. ನಾಜೀರ್, ಎ2 ಜುನೈದ್, ಎ3 ಸೈಯಾದ್ ಸುಹೈಲ್ ಖಾನ್, ಎ4 ಮಹಮ್ಮದ್ ಉಮರ್, ಎ5 ಜಾಹಿದ್ ತಬ್ರೇಜ್, ಎ6 ಸೈಯದ್, ಎ7 ಮುದಾಸೀರ್ ಪಾಷಾ, ಎ8 ಮಹಮ್ಮದ್ ಫಜೀದ್, ಎ9 ಅನೀಸ್ ಫಾತೀಮ್, ಎ10 ಚಾನ್ ಪಾಷಾ ಮತ್ತು ಎ11 ವೈದ್ಯ ಡಾ. ನಾಗರಾಜ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಅರೋಪಿಗಳ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿತ್ತು. ಎನ್ಐಎ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನದ ಬಳಿಕ ತೀರ್ಪು ಪ್ರಕಟವಾಗಲಿದೆ.



