ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣ ಪಂಚಾಯಿತಿ ಮಳಿಗೆಗಳಲ್ಲಿ ತಮ್ಮ ವ್ಯಾಪಾರ-ವಹಿವಾಟು ಮಾಡಿಕೊಂಡಿದ್ದ ವ್ಯಾಪಾರಸ್ಥರು ಕಳೆದ 7 ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಬಾಡಿಗೆ ಕಟ್ಟದೆ ಬಾಕಿಉಳಿಸಿಕೊಂಡಿದ್ದರು. ಅಕ್ಟೋಬರ್ 9ರಂದು ಶಾಸಕ ಜಿ.ಎಸ್. ಪಾಟೀಲರ ಉಪಸ್ಥಿತಿಯಲ್ಲಿ, ಅಧ್ಯಕ್ಷ ಫಕೀರಪ್ಪ ಮಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ.ಪಂ. ಮಳಿಗೆಗಳ ಬಾಡಿಗೆ ವಿಷಯ ಚರ್ಚೆಗೆ ಬಂದಾಗ ಬಾಡಿಗೆ ಬಾಕಿ ಕಟ್ಟದಿರುವ ಮಾಲಿಕರಿಂದ ಆದಷ್ಟು ಬೇಗ ಬಾಕಿ ವಸೂಲಿ ಮಾಡಿಕೊಂಡು ಟೆಂಡರ್ ಪ್ರಕ್ರಿಯೆಗೆ ಮುಂದಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಅಧಿಕಾರಿಗಳಿಗೆ ಹೇಳಿದ್ದರು. ಅದಕ್ಕೆ ಗುರುವಾರದವರೆಗೂ ಅವಕಾಶ ನೀಡಲಾಗಿತ್ತು.
ಅದರಂತೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಪಟ್ಟಣ ಪಂಚಾಯಿತಿಯ 7 ವಾಣಿಜ್ಯ ಮಳಿಗೆಗಳಿಗೆ ಶುಕ್ರವಾರ ಪ.ಪಂ ಅಧಿಕಾರಿಗಳು, ಸಿಬ್ಬಂದಿ ಬೀಗ ಜಡಿದರು. ಬಾಡಿಗೆ ಹಣ ಕಟ್ಟುವಂತೆ ವರ್ತಕರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ನೋಟೀಸ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಮಳಿಗೆಗಳಿಗೆ ಬೀಗ ಹಾಕುವ ಅನಿವಾರ್ಯತೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಪ.ಪಂ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವ ವರ್ತಕರು ಬಾಡಿಗೆ ಹಣವನ್ನು ನೀಡದೇ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಶುಕ್ರವಾರ 7 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಅವುಗಳಿಂದ ಸುಮಾರ 8 ಲಕ್ಷ 8 ಸಾವಿರ ರೂ. ಬಾಡಿಗೆ ಬಾಕಿ ಇದೆ. ಬಾಡಿಗೆ ಕಟ್ಟಲು ಸಾಕಷ್ಟು ಬಾರಿ ನೋಟೀಸ್ ಮತ್ತು ಸಮಯ ನೀಡಲಾಗಿತ್ತು. ಆದರೆ, ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದೆ ಎಂದು ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಈ ಸಂದರ್ಭದಲ್ಲಿ ಎಸ್.ಕೆ. ದೊಡ್ಡಣ್ಣವರ, ರಮೇಶ ಹಲಗಿ, ಅಡಿವೆಪ್ಪ ಮೆಣಸಗಿ, ವಿ.ಐ. ಮಡಿವಾಳರ, ಉದಯ ಮುದೇನಗುಡಿ, ಮಹಾದೇವ ಮ್ಯಾಗೇರಿ, ಎನ್.ಬಿ. ಬೇಲೇರಿ, ಪಿ.ಜಿ. ರಾಂಪೂರ, ನೀಲಪ್ಪ ಚಳ್ಳಮರದ, ನಿಂಗಪ್ಪ ಮಡಿವಾಳರ, ಸಿ.ವಿ. ಹೊನವಾಡ, ಜೆ.ಡಿ. ಬಂಕಾಪೂರ ಇದ್ದರು.