ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಿಂದ ಐಡಿಎಸ್‌ಎಂಟಿ ಮಳಿಗೆಗಳನ್ನು ಬಾಡಿಗೆ ಪಡೆದು ಸರಿಯಾಗಿ ಬಾಡಿಗೆ ಹಣ ಪಾವತಿ ಮಾಡದೆ ಲಕ್ಷಾಂತರ ರೂಗಳ ಬಾಕಿ ಉಳಿಸಿಕೊಂಡಿರುವ ಮಳಿಗೆಗೆಯ ಬಾಡಿಗೆದಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವದು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಎಚ್ಚರಿಕೆ ನೀಡಿದರು.
ಶುಕ್ರವಾರ ಪಟ್ಟಣದ ಬಾನು ಮಾರ್ಕೆಟ್‌ನಲ್ಲಿ ಸಿಬ್ಬಂದಿಗಳೊಂದಿಗೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿಗಳಿಗೆ ಬೀಗ ಹಾಕಿ ಸೀಲ್ ಮಾಡುವ ಮೂಲಕ ಉಳಿದ ಬಾಡಿಗೆದಾರರಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳಿಗೆಗಳ ಬಾಕಿ ಉಳಿಸಿಕೊಂಡಿರುವ ಬಾಡಿಗೆದಾರಿಗೆ ಕಾನೂನುರೀತ್ಯ ಅಂತಿಮವಾಗಿ ಮೂರು ನೋಟಿಸುಗಳನ್ನು ನೀಡಲಾಗಿದ್ದು, ಇದಕ್ಕೂ ಸಹ ಪ್ರತಿಕ್ರಿಯೆ ನೀಡದೆ ಇರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ. ಶುಕ್ರವಾರ ಒಟ್ಟು 6 ಅಂಗಡಿಗಳನ್ನು ಸೀಲ್ ಮಾಡಲಾಗಿದ್ದು, ಬಾಡಿಗೆಯನ್ನು ತುಂಬಿ ರಸೀದಿ ಪಡೆದ ನಂತರವಷ್ಟೇ ಅಂಗಡಿಗಳನ್ನು ಮುಕ್ತ ಮಾಡಲಾಗುವದು ಎಂದರು.
ಈಗಾಗಲೇ ಹಲವಾರು ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಇದಕ್ಕೆ ಸ್ಪಂದಿಸಿ ಬಾಕಿ ಹಣ ಭರಣ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳುವದಿಲ್ಲ. ಆದರೆ ನೋಟಿಸಿಗೂ ಸಹ ಪ್ರತಿಕ್ರಿಯೆ ನೀಡದೆ ಇದ್ದಲ್ಲಿ ಅನಿವಾರ್ಯವಾಗಿ ಕಾನೂನು ಕ್ರಮಗಳಿಗೆ ಮುಂದಾಗಬೇಕಾಗುತ್ತದೆ. ಬಾಕಿ ಇರುವ ಅಂಗಡಿ ಮಾಲೀಕರ ಸಮಕ್ಷಮದಲ್ಲಿ ಕ್ರಮ ತೆಗೆದುಕೊಳ್ಳಲಾಗಿದ್ದು, ಕೂಡಲೇ ಬಾಕಿ ಭರಣ ಮಾಡಿ ದಂಡವನ್ನು ಉಳಿಸಿಕೊಳ್ಳಿ. ಇಲ್ಲವಾದರೆ ಕ್ರಮವನ್ನು ಎದುರಿಸಿ ಎಂದರು.
ಈ ಸಂದರ್ಭದಲ್ಲಿ ಆರ್‌ಓ ಶಿವಾನಂದ ಅಜ್ಜಣ್ಣವರ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಕಂದಾಯ ಅಧಿಕಾರಿ ಹನುಮಂತಪ್ಪ ನಂದೆಣ್ಣವರ ಹಾಗೂ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.