ಬೆಂಗಳೂರು:- ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ರೇಡ್ ಮಾಡಿದ್ದಾರೆ.
ಅದರಂತೆ ಬೆಂಗಳೂರು, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗದಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದೆ.
ಎಲ್ಲೆಲ್ಲಿ ದಾಳಿ?
ಬೆಂಗಳೂರು
ಚಿಕ್ಕಬಳ್ಳಾಪುರ
ಹಾಸನ
ಚಿತ್ರದುರ್ಗ
ಹಿರಿಯೂರು ಟಿಹೆಚ್‌ಒ ಡಾ.ವೆಂಕಟೇಶ್ ಮೇಲೆ ದಾಳಿ:
ಆದಾಯಕ್ಕಿಂತ ಅಧಿಕ ಆಸ್ತಿ ಮತ್ತು ಹಣ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆರೋಗ್ಯಾಧಿಕಾರಿ (ಟಿಹೆಚ್‌ಒ) ಡಾ.ವೆಂಕಟೇಶ್ ಅವರ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಮತ್ತು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ. ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯಲ್ಲಿರುವ ಡಾ.ವೆಂಕಟೇಶ್ ಅವರ ಮನೆ ಹಾಗೂ ಆದಿವಾಲ ಗ್ರಾಮದ ಮನೆ ಮತ್ತು ಕ್ಲಿನಿಕ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಜೂ. ಇಂಜಿನಿಯರ್ ಅಂಜನ್ ಮೂರ್ತಿ ಮನೆಮೇಲೂ ಲೋಕಾಯುಕ್ತ ದಾಳಿ:
ಇದೇ ವೇಳೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಇಂಜಿನಿಯರ್ ಅಂಜನ್ ಮೂರ್ತಿ ಅವರಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಬೆಂಗಳೂರು, ಯಲಹಂಕ, ಗೌರಿಬಿದನೂರು, ಮತ್ತು ತುಮಕೂರಿನ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಈ ಕಾರ್ಯಾಚರಣೆ ನಡೆದಿದೆ. ದಾಳಿಯ ವೇಳೆ ಬೆಂಗಳೂರಿನಲ್ಲಿ ಮೂರು ವಾಸದ ಮನೆಗಳು ಮತ್ತು ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ದಾಖಲೆಗಳು ಪತ್ತೆಯಾಗಿವೆ. ಈ ಕಾರ್ಯಾಚರಣೆಯಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು, ಮತ್ತು ತುಮಕೂರಿನ ಲೋಕಾಯುಕ್ತ ತಂಡಗಳು ಭಾಗವಹಿಸಿವೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಭ್ರಷ್ಟರ ಹೆಡೆಮುರಿ ಕಟ್ಟಲು ಲೋಕಾಯುಕ್ತ ಪಣತೊಟ್ಟಿದ್ದು, ಈ ದಾಳಿಗಳು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.