ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ಸರ್ಫರಾಜ್ ಖಾನ್ ಅವರ ಮನೆ ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹಲಸೂರು ಲೇಔಟ್‌ನಲ್ಲಿರುವ ನಿವಾಸ ಸೇರಿದಂತೆ ಅವರಿಗೆ ಸೇರಿದ ಐಷಾರಾಮಿ ಮನೆ, ಕಚೇರಿ ಮತ್ತು ಕೊಡಗಿನ ರೆಸಾರ್ಟ್ ಮೇಲೆ 13 ತಂಡಗಳಾಗಿ ಏಕಕಾಲದಲ್ಲಿ ದಾಳಿ ಮಾಡಿ ತಪಾಸಣೆ ನಡೆಸಲಾಗುತ್ತಿದೆ.
ನಾಲ್ಕು ವಾಹನಗಳಲ್ಲಿ ಬಂದ ಅಧಿಕಾರಿಗಳು ಸರ್ಫರಾಜ್ ಅವರ ಬ್ಯಾಂಕ್ ಖಾತೆಗಳು ಮತ್ತು ಆಸ್ತಿ ದಾಖಲೆಗಳನ್ನು ಸಂಪೂರ್ಣವಾಗಿ ಜಾಲಾಡುತ್ತಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಹಣಕಾಸು ವ್ಯವಹಾರಗಳು ಮತ್ತು ಆಸ್ತಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.



