ಬೆಂಗಳೂರು:- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಕೊಪ್ಪಳ, ಮೈಸೂರು, ಬಳ್ಳಾರಿ, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
IAS ಸೇರಿ ಮೂವರು ಅಧಿಕಾರಿ ಮನೆ ಮೇಲೆ ದಾಳಿ:
ಬೆಂಗಳೂರಿನಲ್ಲಿ ಐಎಎಸ್ ಸೇರಿ ಮೂವರು ಅಧಿಕಾರಿ ಮನೆ ಮೇಲೆ ಲೋಕಾ ದಾಳಿ ಮಾಡಿದೆ. ಆರ್.ಟಿ.ನಗರದಲ್ಲಿರುವ ಹಿರಿಯ IAS ಅಧಿಕಾರಿ ವಾಸಂತಿ ಅಮರ್ ಮನೆ ಮೇಲೆ ದಾಳಿ ಮಾಡಲಾಗಿದೆ. ಸರ್ಕಾರಿ ಜಮೀನು ಅಕ್ರಮವಾಗಿ ಬೇರೆಯವರ ಹೆಸರಿಗೆ ವರ್ಗಾವಣೆ ಆರೋಪ ಕೇಳಿಬಂದಿದೆ. ವಾಸಂತಿ ಅಮರ್ ಬೆಂಗಳೂರು ನಗರ ವಿಶೇಷ ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಇವರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನಲ್ಲಿ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ದಾಳಿ:
ಮೈಸೂರಿನಲ್ಲಿ ಪಾಲಿಕೆ ಉಪವಿಭಾಗಾಧಿಕಾರಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಮೈಸೂರಿನ ಸಿದ್ಧಾರ್ಥ್ ಬಡಾವಣೆಯಲ್ಲಿ ಇರುವ ಪಾಲಿಕೆ ಉಪ ವಿಭಾಗಾಧಿಕಾರಿ ವೆಂಕಟರಾಮ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅದೇರೀತಿ ಸಾತಗಳ್ಳಿಯ ಜೆಪಿ ನಗರದಲ್ಲಿರುವ ಕೌಶಲ್ಯಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಸ್ವಾಮಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ:
ಕೊಪ್ಪಳ ನಗರದಲ್ಲಿ ವಾಸವಾಗಿರುವ ಅಧಿಕಾರಿಯೊಬ್ಬರ ಮನೆ- ಮೇಲೆ ಇಂದು ಬೆಳ್ಳಂಬೆಳಿಗ್ಗೆ ಲೋಕಾ ತಂಡ ದಾಳಿ ನಡೆಸಿದೆ. ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ನ ಉಪ ನಿರ್ದೇಶಕರಾಗಿರುವ ಶೇಕು ಚವ್ವಾಣ್ ಎಂಬ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿ, ಅಧಿಕಾರಿಗಳು ಕಡತಗಳನ್ನು ಪರೀಶಿಲಿಸುತ್ತಿದ್ದಾರೆ.
ಅಧಿಕಾರಿ ಇನ್ನೂ ಮನೆಯಲ್ಲಿ ಮಲಗಿರುವಾಗಲೇ ಏಕಾಏಕಿ ದಾಳಿ ನೆಡಸಿ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಏಕಾಏಕಿ ಲೋಕಾ ಅಧಿಕಾರಿಗಳನ್ನು ಕಂಡು ಅಧಿಕಾರಿ ಶೇಕು ಚವ್ವಾಣ ಕಕ್ಕಾಬಿಕ್ಕಿಯಾಗಿದ್ದಾರೆ. ಅಕ್ರಮವಾಗಿ ಆಸ್ತಿ ಗಳಿಕೆಯ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗೆ ಸಂಬಂಧಿಸಿದ ಕೊಪ್ಪಳ, ಹುಬ್ಬಳ್ಳಿಯಲ್ಲಿರುವ ಎರಡು ಮನೆಯ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.
ಬಳ್ಳಾರಿಯಲ್ಲಿ ಮೂರು ಕಡೆ ದಾಳಿ:
ಬಳ್ಳಾರಿಯಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಟೌನ್ ಮತ್ತು ರೂರಲ್ ಪ್ಲ್ಯಾನಿಂಗ್ ಆಫೀಸರ್ ಮಾರುತಿ ಬಗಲಿಗೆ ಸೇರಿದ 3 ಸ್ಥಳಗಳ ಮೇಲೆ ದಾಳಿ ಮಾಡಿರುವ ಬೆಂಗಳೂರು ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ಬೆಂಗಳೂರು ನಿವಾಸಿಯಾಗಿರುವ ಅಧಿಕಾರಿ ಮಾರುತಿ ಬಗಲಿ ವಿರುದ್ಧ ರಾಜ್ಯದ ಹಲವೆಡೆ ಆಸ್ತಿ ಮಾಡಿರುವ ಆರೋಪ ಕೇಳಿಬಂದಿದೆ. ಬಳ್ಳಾರಿ ಮಾತ್ರವಲ್ಲದೇ ರಾಜ್ಯದ ವಿವಿಧ ಕಡೆ ಆಸ್ತಿ ಮಾಡಿರುವ ಕುರಿತು ಮಾಹಿತಿ ಇದೆ ಎನ್ನಲಾಗಿದೆ.
ಒಟ್ಟಾರೆ ಅಕ್ರಮ ಆದಾಯ ಗಳಿಕೆ ಆರೋಪ ಕೇಳಿಬಂದ ಹಿನ್ನಲ್ಲೆ ಐಎಎಸ್ ಸೇರಿದಂತೆ ಹಲವು ಅಧಿಕಾರಿ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಆ ಮೂಲಕ ಬೆಳ್ಳಂ ಬೆಳಗ್ಗೆ ಶಾಕ್ ನೀಡಲಾಗಿದೆ.