ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ: ಬೆಳ್ಳಂ ಬೆಳಗ್ಗೆ ರಾಜ್ಯದ 7 ಜಿಲ್ಲೆಗಳಲ್ಲಿ ಏಕಾಏಕಿ ದಾಳಿ!

0
Spread the love

ಬೆಳಗಾವಿ:– ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಅರೋಪ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮನೆ, ಕಚೇರಿ, ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ

Advertisement

ಎಸ್, ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ ಆರೋಪದಡಿ ಬೆಳ್ಳಂ ಬೆಳಗ್ಗೆ ಕರ್ನಾಟಕದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು. ಅದರಂತೆ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ದಾವಣಗೆರೆ, ಉಡುಪಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

ಎಲ್ಲೆಲ್ಲಿ ದಾಳಿ?

ಬೆಳಗಾವಿ:- ಇಲ್ಲಿನ ಸುವರ್ಣ ಸೌಧದ ದೇವರಾಜ್ ಅರಸು ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗಪ್ಪ, ಬಾಗಲಕೋಟೆಯ ಜಿಲ್ಲಾಡಳಿತ ಕಚೇರಿ ಲೆಕ್ಕಪತ್ರ ವಿಭಾಗದ ಎಫ್‌ಡಿಎ ಶೈಲ ಸುಭಾಷ್ ತತ್ರಾಣಿ, ಬಳ್ಳಾರಿಯ ಕಾರ್ಯಪಾಲಕ ಎಂಜಿನಿಯರ್ ಅಮೀನ್ ಮುಕ್ತಾರ್ ಅಹಮದ್, ದಾವಣಗೆರೆಯ ಶಿಗ್ಗಾಂವಿ ಪಂಚಾಯಿತಿ ಪಿಡಿಓ ರಾಮಕೃಷ್ಣ, ಉಡುಪಿ ಜಿಲ್ಲೆ ಕಾರ್ಕಳದ ಮೆಸ್ಕಾಂ ಅಕೌಂಟೆಂಟ್‌ ಗಿರೀಶ್‌ ರಾವ್‌, ಗದಗದ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಗಂಗಾಧರ, ಧಾರವಾಡದ ಪಿಡಬ್ಲುಡಿ ಮುಖ್ಯ ಇಂಜಿನಿಯರ್ ಹೆಚ್.ಸುರೇಶ್ ಅವರ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

ಕಲಬುರಗಿ:- ನಗರದ ಹುಸೇನಿ ಗಾರ್ಡನ್ ಬಡಾವಣೆಯಲ್ಲಿರುವ ಬಳ್ಳಾರಿ ಲೋಕೋಪಯೋಗಿ ಇಲಾಖೆಯ ಸರ್ಕಲ್ ಆಫೀಸ್ ಅಧೀಕ್ಷಕ ಇಂಜಿನಿಯರ್ ಅಮೀನ್‌ ಮುಕ್ತಾರ್ ನಿವಾಸದ ಮೇಲೆ ಇಂದು ನಸುಕಿನಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಮೂಲದವರೇ ಆಗಿರುವ ಅಮೀನ್ ಮುಕ್ತಾರ್ ಈ ಹಿಂದೆ ಇದೇ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ. ಇಂದು ನಸುಕಿನಲ್ಲಿ ಮನೆಯ ಬಾಗಿಲು ತಟ್ಟಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದು, ಅಮೀನ್ ಅವರ ಸಹೋದರ ಡಾ.ಆರೀಫ್ ಅವರಿಗೆ ಸೇರಿದ ಏಷ್ಯನ್ ಲೈಫ್ ಸ್ಟೈಲ್ ಅಪಾರ್ಟ್‌ಮೆಂಟ್ ಮೇಲೆ ಸಹ ದಾಳಿ ನಡೆಸಿದ್ದಾರೆ. ಇದರ ಜೊತೆಗೆ, ಬಳ್ಳಾರಿ ಮತ್ತು ಬಸವಕಲ್ಯಾಣದಲ್ಲೂ ದಾಳಿ ನಡೆದಿದೆ. ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಆರೋಪದ ಅಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.

ಬಾಗಲಕೋಟೆ:
ಇಲ್ಲಿನ ಜಿಲ್ಲಾಡಳಿತ ಕಚೇರಿ ಲೆಕ್ಕಪತ್ರ ವಿಭಾಗದ ಎಫ್‌ಡಿಎ ಶ್ರೀಶೈಲ್ ತತ್ರಾಣಿ ಅವರ ಅಮೀನಗಢ ಪಟ್ಟಣದಲ್ಲಿರುವ ಮನೆ ಹಾಗೂ ಆಭರಣ ಮಳಿಗೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಬಾಗಲಕೋಟೆ ಲೋಕಾಯುಕ್ತ ಡಿಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಹಾವೇರಿ:
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮ ಪಂಚಾಯತಿ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಗ್ರಾಮ ಪಂಚಾಯತಿ ಪಿಡಿಓ ರಾಮಕೃಷ್ಷಪ್ಪ ಗುಡಗೇರಿ ಎಂಬ ಪಿಡಿಓ ಸಂಬಂಧಿಸಿದ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ಮನೆ ಮತ್ತು ಬಾಡ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ದಾವಣಗೆರೆ ಮತ್ತು ಹಾವೇರಿ ಲೋಕಾಯುಕ್ತರ ಪೊಲೀಸ್ ಸಿಬ್ಬಂದಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಗದಗ:
ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಮನೆ ಗಂಗಾಧರ ಶಿರೋಳ ಅವರ ಮನೆ, ಕಚೇರಿ ಹಾಗೂ ಅಳಿಯ, ಭಾವನ ಮನೆಗಳು ಸೇರಿ 6 ಕಡೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಗದಗ ನಗರದ ಅಳಿಯ ವಿಜಯ ಯಳಮೇಲಿ, ಭಾವ ನಾಗರಾಜ್ ಅಕ್ಕಿ ಮನೆ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಸಂಬಧಿಕರ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಹಣಮಂತರಾಯ, ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ, ವಾಹನಗಳು, ಆಸ್ತಿಪತ್ರಗಳು ದೊರೆತಿದ್ದು ಶೋಧ ಕಾರ್ಯ ಮುಂದುವರಿದಿದೆ.

ಇದರೊಂದಿಗೆ ಬಳ್ಳಾರಿ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲೂ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿರೋದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here