ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಧರ್ಮ, ಸಂಸ್ಕೃತಿ, ಸಂಪ್ರದಾಯ, ಹಬ್ಬ, ಆಚರಣೆಗಳ ಪ್ರತೀಕವಾದ ದೇವಸ್ಥಾನದಲ್ಲಿ ಪೂಜೆ, ಧ್ಯಾನ, ಸತ್ಸಂತ, ಸಾಂಸ್ಕೃತಿಕ ಆಚರಣೆಗಳು ಮೇಳೈಸಬೇಕು ಎಂದು ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂದು ನಡೆದ ವಿಶೇಷ ಪೂಜೆ, ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನಗೈದರು.
ಸಕಲ ಜೀವಾತ್ಮರಿಗೆ ಶ್ರೀರಕ್ಷೆಯಾಗಿರುವ ಶಿವನಾಮ ಸ್ಮರಣೆ ಮಾಡಿದರೆ ಮಾನವರ ಪಾಪ ನಾಶವಾಗಿ ಪುಣ್ಯ ಲಭಿಸುತ್ತದೆ. ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನವಾಗಿದೆ. ನಿತ್ಯದ ಬದುಕಿನ ಜಂಜಾಟದ ನಡುವೆಯೂ ದೇವರು, ಧರ್ಮ, ಸತ್ಸಂಗ, ಶಿವ ಸ್ಮರಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ. ಈ ಪರಂಪರೆ ಮುಂದುವರೆಯಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ತಹಸೀಲ್ದಾರ ವಾಸುದೇವಸ್ವಾಮಿ ಮಾತನಾಡಿ, ದೇವಸ್ಥಾನಗಳಲ್ಲಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಕಲಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ನಮ್ಮ ಸಾಂಸ್ಕೃತಿಕ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಾಧ್ಯವಾಗುತ್ತದೆ. ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ ಹಬ್ಬ, ಆಚರಣೆಗಳ ಪ್ರತೀಕವಾಗಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲೂ ಇವುಗಳನ್ನು ಉಳಿಸಿ-ಬೆಳೆಸಬೇಕಾಗಿದೆ ಎಂದರು.
ಈ ವೇಳೆ ದೇವಸ್ಥಾನ ಭಕ್ತರ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಅರ್ಚಕರ ಸಂಘದ ಅದ್ಯಕ್ಷ ವಿ.ಎಲ್. ಪೂಜಾರ, ಚನ್ನಪ್ಪ ಜಗಲಿ, ಪಿಎಸ್‌ಐ ಈರಣ್ಣ ರಿತ್ತಿ ಮಾತನಾಡಿದರು. ಅರ್ಚಕರಾದ ಸೋಮನಾಥ ಪೂಜಾರ, ನಾಗರಾಜ ಪೂಜಾರ, ಚಿಕ್ಕರಸಯ್ಯ ಪೂಜಾರ, ಸಮೀರ ಪೂಜಾರ, ಪ್ರದೀಪ ಪೂಜಾರ, ಮುಂತಾದವರಿದ್ದರು.
ಮೆಹಬೂಬ ಸಂಗಡಿಗರಿಂದ ಭಕ್ತಿ ಗೀತೆಗಳು ಅಹೋರಾತ್ರಿ ನಡೆದವು. ಜಿ.ಎಸ್. ಗುಡಗೇರಿ, ದಿಗಂಬರ ಪೂಜಾರ, ಅರ್ಚಕ ರಾಘವೇಂದ್ರ ಪೂಜಾರ ನಿರ್ವಹಿಸಿದರು.
ಕೃಷ್ಣ ಕ್ಷತ್ರಿಯ, ರಾಘವೇಂದ್ರ ಕ್ಷತ್ರಿಯ ಅವರಿಂದ ಕೊಳಲು ಹಾಗೂ ಶಹನಾಯಿ ಜುಗಲ್‌ಬಂದಿ, ಶಾರದಾ ಸಂಗೀತ ಗುರುಕುಲದ ಗಾಯತ್ರಿ ಕುಲಕರ್ಣಿ ಸಂಗಡಿಗರಿಂದ ಸಂಗೀತ ಸೇವೆ, ಹುಬ್ಬಳ್ಳಿಯ ಕು.ರಕ್ಷಾ ಜೋಶಿ ಮತ್ತು ಲಕ್ಷ್ಮೇಶ್ವರದ ಕಲಾ ವೈಭವ ಭರತನಾಟ್ಯ ಶಾಲೆಯ ಶಿಕ್ಷಕಿ ಭವ್ಯ ಕತ್ತಿ ಮತ್ತು ಹುಬ್ಬಳ್ಳಿಯ ಸಂಕಲ್ಪ ನೃತ್ಯ-ಸಾಂಸ್ಕೃತಿಕ ಸಂಸ್ಥೆ ಕಲಾ ಪ್ರತಿಭೆಗಳಿಂದ ಭರತನಾಟ್ಯ, ಜಾನಪದ ನೃತ್ಯ ವೈಭವ ಎಲ್ಲರ ಮನ ಸೆಳೆಯಿತು. ಶಾರದಾ ಸಂಗೀತ ಗುರುಕುಲ ವಿದ್ಯಾಪೀಠದ ಗಾಯತ್ರಿ ಕುಲಕರ್ಣಿ ಅವರಿಂದ ಶಾಸ್ತಿಯ ಮತ್ತು ಸುಗಮ ಸಂಗೀತ ಗೀತೆಗಳ ಮೂಲಕ ಶಿವನ ಸ್ಮರಣೆ ಮಾಡುತ್ತಾ ಜನರ ಮನಸೆಳೆದರು.