ಸಿದ್ಧಲಿಂಗ ಶ್ರೀಗಳು ಚಿರಸ್ಥಾಯಿಯಾಗಿದ್ದಾರೆ : ಬಸವರಾಜ ಹೊರಟ್ಟಿ

0
horatti
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನನ್ನ ಕಾರ್ಯಗಳಿಗೆ ಪ್ರೇರಣೆಯಾಗಿದ್ದರು. ಈ ರಾಜ್ಯದಲ್ಲಿ ಜಾತ್ಯಾತೀತ ಪರಂಪರೆಯನ್ನು ಹೆಮ್ಮರವಾಗಿ ಬೆಳೆಸಿದ ಕೀರ್ತಿ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನುಡಿದರು.

Advertisement

ಅವರು ನಗರದ ತೋಂಟದಾರ್ಯ ಮಠದ ಜಾತ್ರಾ ಮಹಾರಥೋತ್ಸವದ ನಂತರ ಜರುಗಿದ ವೇದಿಕೆ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ ಮಾತನಾಡಿದರು.

ಅನೇಕ ಜನರು ಬದುಕಿದರೂ ಸತ್ತಂತಿರುತ್ತಾರೆ. ಆದರೆ ಕೆಲವೇ ಮಹಾತ್ಮರು ಸಿದ್ಧಲಿಂಗ ಮಹಾಸ್ವಾಮಿಗಳಂತೆ ಅಗಲಿಕೆಯ ನಂತರವೂ ತಮ್ಮ ಕೈಂಕರ್ಯಗಳ ಮೂಲಕ ಚಿರಸ್ಥಾಯಿಯಾಗಿರುತ್ತಾರೆ. ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಸಹಾಯ ಕೇಳಿಕೊಂಡು ಬಂದ ಅಸಂಖ್ಯ ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ದೇವರು ಹಾಗೂ ನನ್ನ ಶಿಕ್ಷಕ ಸಮೂಹ ಕೊಟ್ಟ ಅಧಿಕಾರವನ್ನು ಜನಸೇವೆಗೆ ಬಳಸಿದ್ದೇನೆ.

ನನ್ನನ್ನು ಸತತವಾಗಿ ಎಂಟು ಬಾರಿ ವಿಧಾನ ಪರಿಷತ್ತಿಗೆ ಆರಿಸಿ ಕಳುಹಿಸಿದ ಶಿಕ್ಷಕ ಸಮೂಹಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.

ಡಾ.ಎಂ.ಎಂ ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಬಸವರಾಜ ಹೊರಟ್ಟಿಯವರ ಅಭಿನಂದನ ಗ್ರಂಥಗಳಾದ `ಮೈಲುಗಲ್ಲುಗಳೇ ಮಾತನಾಡುತ್ತವೆ’ ಹಾಗೂ `ದಿಟ್ಟ ಹೆಜ್ಜೆ’ ಗ್ರಂಥಗಳು ಲೋಕಾರ್ಪಣೆಗೊಂಡವು.

`ಮೈಲುಗಲ್ಲುಗಳೇ ಮಾತನಾಡುತ್ತವೆ’ ಗ್ರಂಥದ ಸಂಪಾದಕ ಡಾ.ಸಂಗಮನಾಥ ಲೋಕಾಪೂರ ಮಾತನಾಡಿ, ಶಿಕ್ಷಕರ ಸುಪುತ್ರರಾಗಿ, ಸ್ವತಃ ಶಿಕ್ಷಕರಾಗಿ ಹಾಗೂ ಶಿಕ್ಷಕರ ಪ್ರತಿನಿಧಿಯಾಗಿ ಸತತ ಎಂಟು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಬಸವರಾಜ ಹೊರಟ್ಟಿಯವರು ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದಾರೆ. ಆತ್ಮಪ್ರಶಂಸೆ ಮಾಡಿಕೊಳ್ಳುವ ಗುಣ ಅವರಲ್ಲಿ ಇಲ್ಲವಾದ್ದರಿಂದ ಹೊರಟ್ಟಿಯವರು ಮಾಡಿದ ಪರೋಪಕಾರಗಳು ದಾಖಲೆಯಾಗಿ ಉಳಿಯಲಿ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ನಾವು ಸೇರಿಕೊಂಡು `ಮೈಲುಗಲ್ಲುಗಳೇ ಮಾತನಾಡುತ್ತವೆ’ ಎಂಬ ಗ್ರಂಥ ತಯಾರು ಮಾಡಿದೆವು ಎಂದರು.

ಸಿದ್ಧಯ್ಯನಕೋಟೆಯ ವಿಜಯಮಹಾಂತ ಶಾಖಾಮಠದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳನ್ನು ಪೀಠಾರೋಹಣದ ನಿಮಿತ್ಯ ಸಂಮಾನಿಸಲಾಯಿತು. ಪಂ.ಕುಮಾರ ಮರಡೂರ ಅವರಿಂದ ವಚನ ಸಂಗೀತ, ನಾಗರತ್ನ ಹಡಗಲಿ ಋತಿಕಾ ನೃತ್ಯ ನಿಕೇತನ ತಂಡದವರಿಂದ ವಚನ ನೃತ್ಯರೂಪಕ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು. ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸೊನ್ನ ವಿರಕ್ತಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್. ಬೇಲೂರ ಸ್ವಾಗತಿಸಿದರು. ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ, ಡಾ.ಬಸವರಾಜ ಧಾರವಾಡ ಮುಂತಾದವರಿದ್ದರು.

ಜಾತ್ರಾ ಸಮಿತಿ ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿ ಗವಿಸಿದ್ಧಪ್ಪ ಗಾಣಿಗೇರ, ಬರಕತ್ ಅಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿ ತಿಮ್ಮರಡ್ಡಿ ಕೋನರಡ್ಡಿ, ಕೋಶಾಧ್ಯಕ್ಷ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷ ಅಜಯ ಮುನವಳ್ಳಿ, ಶ್ರೀಮಠದ ವ್ಯವಸ್ಥಾಪಕರಾದ ಎಂ.ಎಸ್ ಅಂಗಡಿ, ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಮಾತನಾಡಿ, ಹೊರಟ್ಟಿಯವರ ಸೇವಾಕಾರ್ಯಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಶಿಕ್ಷಕರೇ ಅವರ ಶ್ರೀರಕ್ಷೆಯಾಗಿದ್ದು, ಅವರ ಹಿತಕ್ಕಾಗಿ ಅನೇಕ ಸರ್ಕಾರಿ ನೀತಿ-ನಿಯಮಗಳನ್ನು ಪಟ್ಟು ಹಿಡಿದು ಹೊರಟ್ಟಿಯವರು ಪರಿಷ್ಕರಿಸಿದ್ದಾರೆ. ಹೊರಟ್ಟಿಯವರಂತೆ ಕಟಿಬದ್ಧರಾಗಿ ಕೆಲಸ ಮಾಡುವ ಮನೋಭಾವ ಇಂದಿನ ಶಾಸಕರಿಗೆ ಅವಶ್ಯವಿದ್ದು, ಇದಕ್ಕಾಗಿ ಹೊರಟ್ಟಿಯವರ ಕುರಿತು ಬಿಡುಗಡೆಯಾದ ಗ್ರಂಥಗಳನ್ನು ಅವರಿಗೆ ಓದಲು ನೀಡಬೇಕು ಎಂದರು.

 


Spread the love

LEAVE A REPLY

Please enter your comment!
Please enter your name here