Homecultureಲಿಂಗೈಕ್ಯ ಗುರುಗಳ ಅಧ್ಯಯನಶೀಲತೆ ಅನನ್ಯ:ಡಾ.ಮಹಾಂತಸ್ವಾಮಿಗಳು

ಲಿಂಗೈಕ್ಯ ಗುರುಗಳ ಅಧ್ಯಯನಶೀಲತೆ ಅನನ್ಯ:ಡಾ.ಮಹಾಂತಸ್ವಾಮಿಗಳು

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅನ್ನ, ಅಕ್ಷರ, ದಾಸೋಹಕ್ಕೆ ನಾಡಿನಲ್ಲಿ ಪ್ರಸಿದ್ಧವಾಗಿರುವ ತೋಂಟದಾರ್ಯ ಮಠವು ಸಮಾಜಕ್ಕೆ ಕೊಡುಗೆ ನೀಡಿ ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ಜಡೆ ಸಂಸ್ಥಾನಮಠದ ಪೂಜ್ಯ ಡಾ. ಮಹಾಂತ ಮಹಾಸ್ವಾಮಿಗಳು ನುಡಿದರು.

ಅವರು ಬುಧವಾರ ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವದ ಲಘುರಥೋತ್ಸವ ಕಾರ್ಯಕ್ರಮದಲ್ಲಿ ಗೌರವ ಸಂಮಾನ ಸ್ವೀಕರಿಸಿ ಮಾತನಾಡಿದರು.

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನನಗೆ ಮಾರ್ಗದರ್ಶಕರಾಗಿದ್ದರು. ನಾನು ಪೀಠಾಧಿಕಾರ ವಹಿಸಿಕೊಂಡ ದಿನದಂದು ಜಡೆ ಸಂಸ್ಥಾನಮಠದ ಸಂಪೂರ್ಣ ಇತಿಹಾಸವುಳ್ಳ ಪುಸ್ತಕವೊಂದನ್ನು ನನಗೆ ನೀಡಿ ಅಧ್ಯಯನ ಮಾಡುವಂತೆ ತಿಳಿಸಿದ್ದರು. ಲಿಂಗೈಕ್ಯ ಗುರುಗಳ ಅಧ್ಯಯನಶೀಲತೆ ಹಾಗೂ ಸಾಮಾಜಿಕ ಕಾಳಜಿ ನಮಗೆಲ್ಲರಿಗೂ ಸದಾಕಾಲ ಪ್ರೇರಣೆಯಾಗಿರುತ್ತದೆ ಎಂದರು.

ದೆಹಲಿ ಜಾಟವಾ ಸಮುದಾಯದ ಶ್ರೀಮಠದ ಭಕ್ತರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳಾದ ರವೀಂದ್ರ ಪ್ರಧಾನ್ ಮಾತನಾಡಿ, ಜಾಟವಾ ಜನಾಂಗ ಮತ್ತು ತೋಂಟದಾರ್ಯ ಮಠಕ್ಕೂ ಇರುವ ಬಾಂಧವ್ಯವವನ್ನು ನೆನೆದರು. ಬೆಳಗಾವಿಯ ಪ್ರೊ.ಶಾಲಿನಿ ದೊಡಮನಿ ರಚಿಸಿದ `ಕರ್ನಾಟಕದ ಗಾಂಧಿ’ ಹರ್ಡೇಕರ ಮಂಜಪ್ಪನವರು ಗ್ರಂಥದ ಹಿಂದಿ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಡಾ.ಪ್ರಭು ಮಹಾಸ್ವಾಮಿಗಳು ವಿರಕ್ತಮಠ ಸಂಡೂರ, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಕಲಬುರ್ಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯಸ್ವಾಮಿಗಳು, ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯಸ್ವಾಮಿಗಳು, ಡಾ.ಮಹಾಂತಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಡಾ.ಅಶೋಕ ಹುಗ್ಗಣ್ಣವರ ವಚನ ಸಂಗೀತ ನೀಡಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ.ಕೆ.ಎಚ್ ಬೇಲೂರ ಸ್ವಾಗತಿಸಿದರು. ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಮುಂತಾದವರಿದ್ದರು.

ಜಾತ್ರಾ ಸಮಿತಿ ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿಗಳಾದ ಗವಿಸಿದ್ಧಪ್ಪ ಗಾಣಿಗೇರ, ಬರಕತ್ ಅಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿ ತಿಮ್ಮರಡ್ಡಿ ಕೋನರಡ್ಡಿ, ಕೋಶಾಧ್ಯಕ್ಷ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷ ಅಜಯ ಮುನವಳ್ಳಿ, ಶ್ರೀಮಠದ ವ್ಯವಸ್ಥಾಪಕರಾದ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

ಜಡೆ ಸಂಸ್ಥಾನಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಮಹಾಸ್ವಾಮಿಗಳು ಮಾತನಾಡಿ, ಕರ್ನಾಟಕ ರಾಜ್ಯ ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಉನ್ನತ ಮಟ್ಟಕ್ಕೆ ತಲುಪಿದ್ದರೆ ಅದರ ಹಿಂದೆ ಮಠ-ಮಾನ್ಯಗಳ ಕೊಡುಗೆ ಸಾಕಷ್ಟಿದ್ದು, ತೋಂಟದಾರ್ಯ ಮಠ ಈ ಸಾಲಿನಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಪಾರ ವಿದ್ವತ್ತುಳ್ಳ ಅಪರೂಪದ ಯತಿಗಳಾಗಿದ್ದು, ನನಗೆ ಹಾಗೂ ನಮ್ಮ ಹಿರಿಯ ಸ್ವಾಮಿಗಳಿಗೆ ಅವರ ಮಾರ್ಗದರ್ಶನ ಸದಾಕಾಲ ಇರಬೇಕು ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!