ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಹರದಗಟ್ಟಿ ಗ್ರಾಮದ ಹೊರವಲಯದಲ್ಲಿ ಲಕ್ಷ್ಮೇಶ್ವರ ಕಡೆಗೆ ಬರುತ್ತಿದ್ದ ಮೆಕ್ಕೆಜೋಳ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.
ಹರದಗಟ್ಟಿ ಗ್ರಾಮದಿಂದ ರೈತರ ಮೆಕ್ಕೆಜೋಳ ಖರೀದಿಸಿ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿನ ಕೆಂಪಿಗೆರೆ ಬಳಿ ಅಪಘಾತ ಸಂಭವಿಸಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಲಾರಿ ಚಾಲಕ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ. ಲಾರಿಯಲ್ಲಿ ಸುಮಾರು 100 ಕ್ವಿಂಟಲ್ ಮೆಕ್ಕೆಜೋಳದ ಚೀಲಗಳು ಇದ್ದವು ಎಂದು ತಿಳಿದುಬಂದಿದ್ದು, ಪಲ್ಟಿಯಾದ ಲಾರಿಯಿಂದ ಮೆಕ್ಕೆಜೋಳ ತುಂಬಿದ್ದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಕಾಳುಗಳು ರಸ್ತೆಯ ತುಂಬೆಲ್ಲ ಹರಡಿದ್ದವು.
ಇದೇ ರಸ್ತೆಯಲ್ಲಿ ಈ ಹಿಂದೆ ಹಲವಾರು ವಾಹನಗಳು ಅಪಘಾತಕ್ಕೆ ಈಡಾಗಿದ್ದು, ಇಲ್ಲಿ ತಿರುವು ಇರುವುದರಿಂದ ಅಪಘಾತಕ್ಕೆ ಕಾರಣವಾಗಿದೆ. ಈ ಅಪಾಯಕಾರಿ ತಿರುವನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸದಿರುವದರಿಂದ ಅನೇಕ ಅವಘಡಗಳು ಸಂಭವಿಸುವಂತಾಗಿದೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.



