ಹಾಸನ:- ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬೈರಾಗೊಂಡನಹಳ್ಳಿ ಗ್ರಾಮದಲ್ಲಿ ಲವ್ ಬ್ರೇಕಪ್ ನಿಂದ ಮನನೊಂದ ಯುವಕನೋರ್ವ ವಿಷ ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾನೆ.
22 ವರ್ಷದ ದರ್ಶನ್ ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಮೃತ ದರ್ಶನ್ ಬೇವಿನಹಳ್ಳಿ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸಿ ಜೊತೆಯಲ್ಲಿ ಓಡಾಡಿದ್ದರು. ಬಿಎ ಮುಗಿಸಿ ವ್ಯವಸಾಯ ಮಾಡುತ್ತಿದ್ದ ದರ್ಶನ್ ಯುವತಿಗೆ ಮದುವೆಯಾಗೋಣ ಎಂದಿದ್ದ. ಆದರೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ.
ಇದರಿಂದ ಮನನೊಂದ ದರ್ಶನ್ ಫೆ.5ರಂದು ಮನೆಯಲ್ಲಿಯೇ ವಿಷ ಸೇವಿಸಿದ್ದಾನೆ. ವಿಷ ಸೇವನೆ ಬಳಿಕ ದರ್ಶನ್ ವಾಂತಿ ಮಾಡುತ್ತಿದ್ದನ್ನು ಕಂಡು ಸ್ನೇಹಿತರಾದ ರವಿ ಮತ್ತು ಯಶ್ವಂತ್ ಪ್ರಶ್ನಿಸಿದಾಗ, ಯುವತಿ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ನನ್ನ ಮನಸ್ಸಿಗೆ ಬೇಜಾರಾಗಿದೆ. ಹಾಗಾಗಿ ವಿಷ ಸೇವನೆ ಮಾಡಿರುವುದಾಗಿ ಹೇಳಿ ದರ್ಶನ್ ಕುಸಿದು ಬಿದ್ದಿದ್ದಾನೆ.
ತಕ್ಷಣವೇ ಸ್ನೇಹಿತರು ಅರಸೀಕೆರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ದರ್ಶನ್ ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.