ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಅನ್ನೋ ಕಮಲ್ ಹಾಸನ್ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ತಕ್ಷಣವೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಮಲ್ ನಟನೆ ಥಗ್ ಲೈಫ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಸಾಕಷ್ಟು ವಿವಾದದ ಬಳಿಕವೂ ನಟ ಕಮಲ್ ತಮ್ಮ ಉದ್ದಟತನವನ್ನು ಮತ್ತೆ ಮೆರೆದಿದ್ದಾರೆ. ಕ್ಷಮೆ ಕೇಳುವ ಬದಲು ತಮ್ಮ ಹೇಳಿಕೆಯನ್ನು ಕಮಲ್ ಸಮರ್ಥಿಸಿಕೊಂಡಿದ್ದಾರೆ.
ಕನ್ನಡಿಗರ ಹೋರಾಟ, ಆಕ್ರೋಶಕ್ಕೆ ಮಣಿಯದ ಕಮಲ್ ಹಾಸನ್, ಇದು ನನ್ನ ವೈಯಕ್ತಿಕ ವಿವರಣೆ. ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳು ಅರ್ಹರಲ್ಲ ಎಂದು ತಮ್ಮ ಹೇಳಿಕೆಯನ್ನು ವಿರೋಧಿಸುವವರಿಗೆ ತಿರುಗೇಟು ನೀಡಿದ್ದಾರೆ.
ಕೇರಳದಲ್ಲಿ ನಡೆದ ಥಗ್ ಲೈಫ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್, ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳಿಗೆ ಅರ್ಹತೆ ಇಲ್ಲ. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ತಮಿಳುನಾಡು ಒಂದು ವಿಶಾಲ ಹೃದಯ ರಾಜ್ಯ. ಮಲಯಾಳಲಂನ ಮೆನನ್, ತೆಲುಗಿನ ರೆಡ್ಡಿ, ಕನ್ನಡದ ಐಯ್ಯಂಗಾರ್ ತಮಿಳುನಾಡು ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಭಾಷೆ ಬಗ್ಗೆ ಆಳವಾದ ಚರ್ಚೆಗಳು ನಡೆಯಲಿ. ಇದನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾ ತಜ್ಞರಿಗೆ ಬಿಡೋಣ. ಪ್ರೀತಿ ಎಂದಿಗೂ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ.