ತುಮಕೂರು/ಬೆಂಗಳೂರು: ಪೆಟ್ರೋಲ್ ಬಂಕ್ನಲ್ಲಿ ಪಾಲುದಾರಿಕೆ ನೀಡುವ ಆಮಿಷವೊಡ್ಡಿ ತುಮಕೂರು ಮೂಲದ ಕುಟುಂಬವೊಂದರಿಂದ ಒಂದೂವರೆ ಕೋಟಿ ರೂಪಾಯಿ ಹಾಗೂ 100 ಗ್ರಾಂ ಚಿನ್ನ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ಖಾಸಗಿ ಪೆಟ್ರೋಲ್ ಬಂಕ್ನಲ್ಲಿ ಪಾಲುದಾರಿಕೆ ಕೊಡಿಸುವುದಾಗಿ ನಂಬಿಸಿ ಈ ವಂಚನೆ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ.
ಶೇ.30ರಷ್ಟು ಪಾಲುದಾರಿಕೆ ನೀಡುವ ಆಮಿಷ
ವೀಣಾ ಮತ್ತು ಆಕೆಯ ಮಗ ನಮಿತ್ ಸಿಂಗ್ ಬಂಧಿತರು. ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಯಶವಂತ್ ಸಿಂಗ್ ನಾಪತ್ತೆಯಾಗಿದ್ದಾನೆ. ಅಲ್ಲದೆ, ಮಧ್ಯವರ್ತಿಗಳಾದ ಉಮಾಪತಿ ಮತ್ತು ರಮೇಶ್ ಅವರನ್ನು ತುಮಕೂರು ನಗರದ ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ತುಮಕೂರು ನಿವಾಸಿ ಪ್ರಭು ಅವರನ್ನು ಮಧ್ಯವರ್ತಿಗಳು ಸಂಪರ್ಕಿಸಿದ್ದರು. ಬೆಂಗಳೂರಿನ ಕೆಂಗೇರಿಯ ಖಾಸಗಿ ಪೆಟ್ರೋಲ್ ಬಂಕ್ನಲ್ಲಿ ಎರಡು ಕೋಟಿ ರೂಪಾಯಿಗೆ ಪಾಲುದಾರಿಕೆ ಸಿಗಲಿದೆ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಲಾಭದ ಶೇ.30ರಷ್ಟು ಹಣ ದೊರೆಯಲಿದೆ ಎಂದು ಆಮಿಷವೊಡ್ಡಿದ್ದರು.
ಬಳಿಕ ಪ್ರಭು ಅವರು ಯಶವಂತ್ ಮತ್ತು ವೀಣಾ ಅವರನ್ನು ಭೇಟಿಯಾಗಿದ್ದರು. ಪೆಟ್ರೋಲ್ ಬಂಕ್ನ ಶೇ.70ರಷ್ಟು ಪಾಲು ತಮ್ಮ ಬಳಿ ಉಳಿಸಿಕೊಂಡು, ಉಳಿದ ಶೇ.30ರಷ್ಟು ಪಾಲನ್ನು ಪ್ರಭು ಅವರಿಗೆ ನೀಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ.
100 ಗ್ರಾಂ ಚಿನ್ನ, ಒಂದೂವರೆ ಕೋಟಿ ರೂಪಾಯಿ ಹೂಡಿಕೆ
ಪ್ರಭು ಅವರ ಮಗ ಮತ್ತು ಸೊಸೆ ಸಾಫ್ಟ್ವೇರ್ ಎಂಜಿನಿಯರ್ಗಳಾಗಿರುವುದರಿಂದ ಕುಟುಂಬದವರು ಹೂಡಿಕೆ ಮಾಡುವ ಬಗ್ಗೆ ಸಾಕಷ್ಟು ಯೋಚಿಸಿದ್ದರು. ಬಳಿಕ ಮೊದಲಿಗೆ 100 ಗ್ರಾಂ ಚಿನ್ನ ನೀಡಿದ್ದು, ನಂತರ ಹಂತ ಹಂತವಾಗಿ ಬ್ಯಾಂಕ್ ಮೂಲಕ ಸುಮಾರು ಒಂದೂವರೆ ಕೋಟಿ ರೂಪಾಯಿಯನ್ನು ವರ್ಗಾಯಿಸಿದ್ದರು ಎನ್ನಲಾಗಿದೆ.
ವಂಚನೆಯ ಅನುಮಾನ ಬಾರದಂತೆ ಆರೋಪಿಗಳು ದಾಖಲೆಗಳನ್ನು ತೋರಿಸಿದ್ದರು. ಆಡಿಟರ್ ಜೊತೆ ಚರ್ಚೆ ನಡೆಸುವುದು, ಪೆಟ್ರೋಲ್ ಬಂಕ್ಗೆ ಭೇಟಿ ನೀಡುವುದು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ನಡೆಸಿದ್ದರು. ಬಳಿಕ ಯಶವಂತ್ ಮತ್ತು ವೀಣಾ ದಂಪತಿ ಒಪ್ಪಂದವನ್ನೂ ಮಾಡಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
₹4.50 ಲಕ್ಷ ನೀಡಿ ಬಳಿಕ ಬೆದರಿಕೆ?
ಈ ಹಿಂದೆ ಅಶೋಕ್ ಎಂಬವರು ಕೂಡ ಪೆಟ್ರೋಲ್ ಬಂಕ್ನಲ್ಲಿ ಪಾಲುದಾರರಾಗಿದ್ದರು ಎಂದು ವೀಣಾ ದಂಪತಿ ಪ್ರಭು ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಈ ವಿಚಾರದಿಂದ ಅನುಮಾನಗೊಂಡ ಪ್ರಭು ಅವರು ಹೂಡಿಕೆಯ ನೈಜ ಸ್ಥಿತಿಯನ್ನು ಪರಿಶೀಲಿಸಲು ಮುಂದಾಗಿದ್ದರು.
ಪ್ರತಿ ತಿಂಗಳು ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದ ಆರೋಪಿಗಳು ಕೇವಲ ₹4.50 ಲಕ್ಷ ಮಾತ್ರ ಪಾವತಿಸಿದ್ದಾರೆ. ಉಳಿದ ಲಾಭದ ಹಣದ ಬಗ್ಗೆ ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದಾರೆ ಎಂದು ಪ್ರಭು ಆರೋಪಿಸಿದ್ದಾರೆ.
ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲು
ಯಶವಂತ್ ಮತ್ತು ವೀಣಾ ದಂಪತಿಯಿಂದ ವಂಚನೆಗೊಳಗಾಗಿರುವುದಾಗಿ ಆರ್.ಸಿ. ಜಯರಾಂ, ವಿಜಯಲಕ್ಷ್ಮಿ, ಭಗವಾನ್, ಶಿವಣ್ಣ ಹಾಗೂ ಸಿದ್ದಲಿಂಗಯ್ಯ ಸೇರಿದಂತೆ ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಇನ್ನು ವೀಣಾ ವಿರುದ್ಧ ಬೆಂಗಳೂರಿನ ಕಾಡುಗೊಂಡನಹಳ್ಳಿ, ಸುಬ್ರಹ್ಮಣ್ಯಪುರ, ಬಸವೇಶ್ವರ ನಗರ ಹಾಗೂ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ವಂಚನೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಮತ್ತೊಂದೆಡೆ, ಸಂಬಂಧಿತ ಪೆಟ್ರೋಲ್ ಬಂಕ್ನಲ್ಲಿ ಒಟ್ಟು ನಾಲ್ವರು ಪಾಲುದಾರರಿದ್ದು, ಅವರಲ್ಲಿ ವೀಣಾ ಕೂಡ ಒಬ್ಬರು ಎಂಬ ಮಾಹಿತಿ ಪ್ರಾಥಮಿಕವಾಗಿ ಲಭ್ಯವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.









