ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದ ಮಹಾರಥೋತ್ಸವವು ರವಿವಾರ ಸಂಜೆ ಸಾವಿರಾರು ಭಕ್ತಾಧಿಗಳ ಮಧ್ಯೆ ಸಂಭ್ರಮದಿಂದ ಜರುಗಿತು.
ಸೇರಿದ ಭಕ್ತಾಧಿಗಳು ಘೋಷಣೆಗಳನ್ನು ಕೂಗುತ್ತಾ ರಥವನ್ನು ಎಳೆದರು. ಜಾಂಜ್ ಮೇಳ, ನಂದಿಕೋಲ ಮೇಳ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ತೇರು ಸಾಗಿತು. ರಥದಲ್ಲಿ ಡಾ.ಕೊಟ್ಟೂರೇಶ್ವರ ಶ್ರೀಗಳು ಆಸೀನರಾಗಿದ್ದು ವಿಶೇಷವಾಗಿತ್ತು. ಹರ್ಲಾಪೂರ ಗ್ರಾಮದ ಸುತ್ತ ಮುತ್ತಲಿನ ಗ್ರಾಮದ ಭಕ್ತಾಧಿಗಳು ರಥೋತ್ಸವಕ್ಕೆ ಆಗಮಿಸಿದ್ದರು. ಕೊಟ್ಟೂರೇಶ್ವರ ಗದ್ದುಗೆಗೆ ನೈವೇದ್ಯ ತಲುಪಿಸಿ ತಮ್ಮ ಸಂಕಲ್ಪವನ್ನು ಅರ್ಪಿಸಿದರು.
ಇದಕ್ಕೂ ಮುನ್ನ ಡಾ.ಕೊಟ್ಟೂರೇಶ್ವರ ಮಹಾಸ್ವಾಮಿಗಳನ್ನು ಸಿದ್ದಲಿಂಗೇಶ ಕೋರಿಯವರ ಮನೆಯಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ ಶ್ರೀ ಮಠಕ್ಕೆ ಕರೆತರಲಾಯಿತು. ಮುಂಜಾನೆ ಕೊಟ್ಟೂರೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿದವು.